ಗ್ರಂಥ - ಸಂಧ್ಯಾವಂದನೆ (Sandhyavandane) ರಾತ್ರಿ- ಮುಂಜಾನೆ, ಪೂರ್ವಹ್ನ-ಮಧ್ಯಾಹ್ನ, ಸಂಜೆ-ರಾತ್ರಿ ಇವುಗಳ ಸಂಧಿಕಾಲಗಳಲ್ಲಿ ಕಾಲಪುರುಷನ ವಂದನೆ ಅಥವಾ ಉಪಾಸನೆ "ಸಂಧ್ಯಾವಂದನೆ" . "ಕಾಲಶರೀರಿಯಾದ ಪರಮಾತ್ಮನ ಅವಯವದಲ್ಲಿ ದಿನನಿತ್ಯ ಕಾಲವನ್ನು ದಾಟುವುದಕ್ಕಾಗಿ ಅವನೇ ಕೊಟ್ಟಿರುವ ಪುಣ್ಯಕಾಲ ಸಂಧ್ಯೆ" - ಪೂಜ್ಯ ಶ್ರೀಶ್ರೀ ರಂಗಪ್ರಿಯ ಸ್ವಾಮೀಜೀ ಅವರ ಗುರುಗಳಾದ ಶ್ರೀಶ್ರೀರಂಗಮಹಾಗುರುಗಳ ಉದ್ಗಾರ. ಕೆಲವರು ಮಂತ್ರ ರೂಪದಲ್ಲಿ, ಕೆಲವರು ತಂತ್ರ ರೂಪದಲ್ಲಿ, ಕೆಲವರು ಎರಡೂಸೇರಿಸಿ, ಇತರರು ಅರ್ಘ್ಯ ಮತ್ತು ಮೌನದಿಂದ, ಅವರವರಿಗೆ ಋಷಿಗಳು ವಿಧಿಸಿದಂತೆ, ಪ್ರತಿಯೊಬ್ಬ ಭಾರತೀಯನೂ ಆಚರಿಸಬೇಕಿರುವ ಕರ್ಮ. ಈ ಕರ್ಮದ ಮಂತ್ರ -ತಂತ್ರಗಳು, ವಿಧಿ- ವಿಧಾನಗಳು, ವೇದ –ಶಾಖಾಪ್ರಭೇದಗಳು, ಅರ್ಥ- ಅಂತರಾರ್ಥಗಳು, ಕರ್ಮ -ಮರ್ಮಗಳು ಎಲ್ಲವನ್ನೂಳಗೊಂಡ ಈ ಗ್ರಂಥ ಒಂದಿದ್ದರೆ ಮತ್ಯಾವುದರಅವಶ್ಯಕತೆ ಇರುವುದಿಲ್ಲ. "ಭಾರತೀಯ ಸಂಸ್ಕೃತಿಯ ನಡೆದಾಡುವ ಗ್ರಂಥಾಲಯ" ವೆಂದೇ ಪ್ರಸಿದ್ಧರಾಗಿದ್ದ ಪೂಜ್ಯ ಶ್ರೀಶ್ರೀ ರಂಗಪ್ರಿಯ ಸ್ವಾಮೀಜೀ ಯವರು, ತಮ್ಮ ಅಸಾಧಾರಣ ಶಾಸ್ತ್ರ- ಪ್ರಯೋಗ - ಆಚರಣಾ ಪಾಂಡಿತ್ಯ, ಸಾಧನೆ ಮತ್ತು ಗುರ್ವಾನುಗ್ರಹ ದಿಂದ ಪಡೆದ ಒಳನೋಟ ಇವುಗಳನ್ನಾಧರಿಸಿ , ಅಷ್ಟಾಂಗಯೋಗ ವಿಜ್ಞಾನ ಮಂದಿರದಲ್ಲಿ ಅನುಗ್ರಹಿಸಿದ ಪ್ರವಚನಮಾಲಿಕೆಯನ್ನಾಧರಿಸಿ ಹೊರತಂದಿರುವ ಗ್ರಂಥ "ಸಂಧ್ಯಾವಂದನೆ" ಹನ್ನೊಂದು ಅಧ್ಯಾಯದ ಈ ಗ್ರಂಥದ ಮೊದಲನೆಯ ಅಧ್ಯಾಯದಲ್ಲಿ " ಸಂಧ್ಯಾವಂದನೆಯು ಒಂದು ಮಹಾಯೋಗ" ಎಂಬ ಶ್ರೀ ಶ್ರೀರಂಗಮಹಾಗುರುಗಳ ವಾಕ್ಯವನ್ನು ಉದ್ಧರಿಸಿ, "ಜೀವ, ಇಡಾ-ಪಿಂಗಳ- ಸುಷುಮ್ನಾ-ಸಂಧಿಸ್ಥಾನವನ್ನು ಸೇರುವಕಾಲ" ಎಂದು ವಿವರಿಸಿ, ಇಂದಿನ ಅಶ್ರದ್ಧೆಯಕಾರಣಗಳನ್ನೂ ವಿಶ್ಲೇಷಿಸುತ್ತದೆ. " ಫೂರ್ವ ಸಿದ್ಧತೆ" ಎಂಬ ಎರಡನೆಯಅಧ್ಯಾಯ ಸಂಧ್ಯಾಪಾತ್ರೆ-ಪಾತ್ರಗಳು; ದೇಹ – ಮನಸ್ಸುಗಳ ಶುದ್ಧೀಕರಣ, ಉಪಯೋಗಿಸಬೇಕಾದ ಜಲ, ದರ್ಭೆ, ಮಾಡು-ಬೇಡ ಇವುಗಳನ್ನು ತಿಳಿಸುತ್ತದೆ. ಪುಂಡರೀಕಾಕ್ಷನನ್ನು ನೆನೆಸಿಕೊಂಡು, ಹೃದಯಕ್ಕೆ ತಲಪುವಂತೆ , ಜಲವನ್ನು ತಕ್ಕ ಪ್ರಮಾಣದಲ್ಲಿ ಅಚ್ಯುತ, ಅನಂತ, ಗೋವಿಂದ ; ಋಕ್, ಯಜುರ್, ಸಾಮ ವೇದದ ಅಧಿಷ್ಟಾತ್ರ ದೇವತೆಗಳ ಸ್ಮರಣೆಯೊಂದಿಗೆ ಸೇವಿಸುವ ಕ್ರಮ " ಆಚಮನ " ಎಂದು ವಿವರಿಸಿ, " ಮಾರ್ಜನ- ನಮ್ಮನ್ನು ಶುದ್ಧಿಮಾಡಿರಿ" ಎಂದು ಅಪ್ ದೇವತೆಗಳನ್ನು ಪ್ರಾರ್ಥಿಸುವ " ಆಪೋಹಿಷ್ಟಾಮಯೋಭುವಃ....." ಮೊದಲಾದ ಮಂತ್ರಗಳನ್ನು ವಿಸ್ತರಿಸುತ್ತದೆ ಮೂರನೆಯ ಅಧ್ಯಾಯ. ನಾಲ್ಕನೆಯ ಅಧ್ಯಾಯದ ವಿಷಯ "ಪ್ರಾಶನ-ಕುಡಿಯುವುದು" - ಶಿವತಮವಾದ ರಸವನ್ನು ಆತ್ಮಸೂರ್ಯನ ಜ್ಯೋತಿಯಲ್ಲಿ ಹೋಮಮಾಡುತ್ತಿದ್ದೇನೆ ಎಂದು ಸೇವಿಸುವುದು. ವೇದಗಳ ಆಯ್ದಭಾಗಗಳಿಂದ ಇಲ್ಲಿ ಉಪಯೋಗಿಸುವ ಮಂತ್ರಗಳನ್ನು ವಿಶದೀಕರಿಸಿದೆ. "ಪ್ರಾಣಗಳನ್ನು ಸಂಯಮ ಮಾಡುವ" ಮತ್ತು "ಇಂತಹ ಕರ್ಮವನ್ನು ಆಚರಿಸುತ್ತೇನೆ" ಎನ್ನುವುದನ್ನು ವಿಧಿಪೂರ್ವಕವಾಗಿ ಮನಸ್ಸಿಗೆ ಶಾಸನವನ್ನು ತಂದುಕ್ಕೊಳ್ಳುವ "ಸಂಕಲ್ಪ" ದ ವಿಧಾನವನ್ನೂ ಆಮೂಲಾಗ್ರವಾಗಿ ವಿವರಿಸುವ ಐದನೆಯಅಧ್ಯಾಯ "ಪ್ರಾಣಾಯಾಮ ಮತ್ತು ಸಂಕಲ್ಪ". ಚಿದಾಕಾಶದಲ್ಲಿ ಪ್ರೇರಿಸುವ ಪರಮಾತ್ಮಸೂರ್ಯನನ್ನು ಜ್ಞಾಪಿಸಿಕ್ಕೊಂಡು "ನಾನು ಅರ್ಪಣೆಮಾಡುವ ಜಲ–ಅರ್ಘ್ಯ- ಸಾವಿರ ಅರದ ವಜ್ರಾಯುಧದಂತೆ ನನ್ನಲ್ಲಿರುವ ರಜಸ್ತಮೋಗುಣಗಳನ್ನು ಕತ್ತರಿಸಿ ದೂರಮಾಡಲಿ" ಎಂದು ಪ್ರಾರ್ಥಿಸುವ ಮಂತ್ರಗಳ ವಿವರಣೆ; ಮಂದೇಹಾರುಣರು ಎಂಬ ಅಸುರರು ಯಾರು, ಇಂದ್ರ- ವೃತರು ಯಾರು, ವಜ್ರಾಯುಧವೇನು ಮೊದಲಾದ ಕುತೂಹಲಕಾರಿ ವಿಷಯಗಳನ್ನು ವಿವರಿಸಲಾಗಿದೆ ಆರನೆಯ ಅಧ್ಯಾಯದಲ್ಲಿ. ಜೊತೆಗೆ, ದ್ವಾದಶಾತ್ಮನಾದ ದೇವನನ್ನುಕುರಿತು "ಆತ್ಮಧಾರೆಯಜೊತೆಯಲ್ಲಿ ಜಲಧಾರೆಯನ್ನು ಸಮರ್ಪಿಸುವ -ತರ್ಪಣ" ವನ್ನೂ ವಿವರಿಸಿದೆ. ಸಂಧ್ಯಾವಂದನೆಯ ಹೃದಯವಾದ " ಗಾಯತ್ರೀ" ಜಪ ಮುಂದಿನ ಅಧ್ಯಾಯದ ವಿಷಯ. ಸ್ಥಳ, ಆಸನ, ದಿಕ್ಕು, ಋಷಿ- ದೇವತೆ- ಛಂದಸ್ಸು, ಭೂಮಾತೆಯ ಪ್ರಾರ್ಥನೆ, ಆವಾಹನೆ, ಅಂಗ-ಕರ ನ್ಯಾಸ, ಪ್ರಾಣಾಯಾಮ, ಜಪದಕ್ರಮ, ವಿಧಿ-ನಿಷೇಧಗಳು, ಸಂಖ್ಯೆ, ಉಛ್ಛಾರಣಾಕ್ರಮ, ಶಬ್ಧಾರ್ಥ, ಮಂತ್ರದ ಸಾಮಾನ್ಯ ಅರ್ಥ, ಧ್ಯಾನಮೂರ್ತಿಯಾರು ..... ಮುಂತಾದ ವಿಷಯಗಳನ್ನು ಆಮೂಲಗ್ರವಾಗಿ ಚಿಂತಿಸಿದೆ. ಎಂಟು ಮತ್ತು ಒಂಭತ್ತನೆ ಅಧ್ಯಾಯಗಳಲ್ಲಿ, ಬೇರೆಬೇರೆ ವೇದಗಳ ಮತ್ತು ದಿನ ಸಮಯಗಳಲ್ಲಿನ ಉಪಸ್ಥಾನ ಮಂತ್ರಗಳನ್ನೂ, ಮರ್ಮ ಮತ್ತು ಅರ್ಥದೊಡನೆ ವಿವರಿಸಿದ್ದಾರೆ. ಹತ್ತೆನೆಯ ಅಧ್ಯಾಯ ದಿಕ್ಕುಗಳ ನಮಸ್ಕಾರದ ಬಗ್ಗೆ- ಏಕೆ , ಯಾರಿಗೆ, ಉಪಯೋಗವೇನು ಎಂದು ವಿವರಿಸಿದ್ದಾರೆ. ಹನ್ನೊಂದನೆಯ ಅಧ್ಯಾಯ ವೇದಮಂತ್ರಗಳಿಗೆ ಪರ್ಯಾಯ ಶ್ಲೋಕಗಳು, ಬೇರೆಯ ವಿಧಾನಗಳ ಸಂಧ್ಯಾವಂದನೆ , ಜಲವಿಲ್ಲದಿದ್ದಾಗ ಆಚರಿಸುವಬಗೆ ಮೊದಲಾದ ವಿಷಯೆಗಳ ಚರ್ಚೆ ಇದೆ. ಹೀಗೆ ಸಂಧ್ಯಾವಂದನೆ ಯನ್ನು ಆಮೂಲಾಗ್ರವಾಗಿ ಪರಿಶೀಲಿಸುವ "ಸಂಧ್ಯಾವಂದನೆ" ಪ್ರತಿಯೊಬ್ಬ ಭಾರತೀಯನ ಮನೆಯನ್ನೂ ಅಲಂಕರಿಸಬೇಕಾದ ಗ್ರಂಥ.