ಗ್ರಂಥ - ದಿವಿಯ ನಾಟ್ಯವಿಶಾರದ (Diviya natyavisharada)
ಪರದೇವತೆಯಾದ ನಟರಾಜನನ್ನು ಕುರಿತು ಡಾ|| ಎಸ್.ವಿ.ಚಾಮುಗಳೆಂಬ ವಿದ್ವಾಂಸರಿಂದ ಆಂಗ್ಲಭಾಷೆಯಲ್ಲಿ “The Divine Dancer” ಎಂಬ ಪುಸ್ತಕವು ಪ್ರಕಾಶಗೊಂಡಿತು. ಅದರಲ್ಲಿನ ಗಹನವೂ, ಅಪೂರ್ವವೂ ಆದ ವಿಚಾರಗಳನ್ನು ಅರಿಯುವ ಉತ್ಸಾಹಿಗಳಾದ ಕನ್ನಡ ಓದುಗರ ಬೇಡಿಕೆಯನ್ನು ಮನಗಂಡು ಶ್ರೀಮಂದಿರವು ಈ ಭಾವಾನುವಾದ ಗ್ರಂಥವನ್ನು ಪ್ರಕಾಶಪಡಿಸಿದೆ. ಸನ್ಮಾನ್ಯ ಶ್ರೀ ತಾರೋಡಿ ಸುರೇಶ ಅವರು ಈ ಭಾವಾನುವಾದದ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿದ್ದಾರೆ.
ಸಾಹಿತ್ಯಲೋಕದಲ್ಲಿ ನಟರಾಜನ ಮೂರ್ತಿಯಲ್ಲಿ ಕಂಡುಬರುವ ರಚನಾವೈಶಿಷ್ಟ್ಯಗಳ ಕುರಿತು ಬುದ್ಧಿಯ ಹಾಗೂ ಭಾವನೆಯ ಆಧಾರದ ಮೇಲೆ ತರ್ಕಿಸಿ ಬರೆದ ಪುಸ್ತಕಗಳೂ ಲೇಖನಗಳೂ ಹೇರಳವಾಗಿವೆ. ಆದರೆ ಈ ಪುಸ್ತಕದಲ್ಲಿ ಕಂಡುಬರುವ ಪ್ರಧಾನ ವಿಷಯಗಳು ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ತಮ್ಮ ಆತ್ಮಭೂಮಿಕೆಯಲ್ಲಿ ನಟರಾಜನ ದರ್ಶನವನ್ನು ಮಾಡಿ ಹೊರತಂದ, ವಿಜ್ಞಾನ ಸಮ್ಮತವಾದ ಸತ್ಯದ ತಳಹದಿಯ ಮೇಲೆ ರೂಪಿತವಾಗಿವೆ. ಬೇರೆಲ್ಲಿಯೂ ಕಾಣ ಸಿಗದ ಅಪೂರ್ವವಿಚಾರಗಳನ್ನು ಮಹಾಗುರುಗಳ ಪದತಲದಲ್ಲಿ ಕುಳಿತು ಸಂಗ್ರಹಿಸಿ, ತಮ್ಮ ಸ್ವಂತ ಅಧ್ಯಯನದಿಂದ ಪಡೆದ ಅಭಿಪ್ರಾಯಗಳು ಹಾಗೂ ವಿಮರ್ಶೆಗಳಲ್ಲಿ ಗುರುವಿನ ವಿಚಾರಗಳಿಗೆ ಒಪ್ಪುವಂತಹ ಅಂಶಗಳನ್ನು ಸೇರಿಸಿ ಈ ಗ್ರಂಥದಲ್ಲಿ ತಿಳಿಯಪಡಿಸಿದ್ದಾರೆ ಡಾ|| ಎಸ್.ವಿ.ಚಾಮುಗಳು.
ಈ ಗ್ರಂಥದ ಪ್ರಾರಂಭದ ಅಧ್ಯಾಯಗಳಲ್ಲಿ ಶೈವ ಸಿದ್ಧಾಂತದ ಮತ್ತು ಅದರ ಬೆಳವಣಿಗೆಯ ಕುರಿತು ಸಂಕ್ಶಿಪ್ತವಾದ ನೋಟವನ್ನು ನೀಡಲಾಗಿದೆ. ವೇದ, ಉಪನಿಷತ್ತುಗಳು, ಮಹಾಭಾರತಗಳ ಅವಲೋಕನವನ್ನು ಮಾಡಿ ಶಿವನ ಕುರಿತಾಗಿ ಬಹುಪುರಾತನ ಕಾಲದಿಂದಲೂ ಇರುವ ಒಂದು ನೋಟವನ್ನು ಸಂಕ್ಷಿಪ್ತವಾಗಿ ತಿಳಿಯಪಡಿಸಿದೆ. ಯೋಗದ ಕ್ಷೇತ್ರಕ್ಕೂ ಶೈವೋಪಾಸನೆಗೂ ಇರುವ ನಿಕಟವಾದ ಸಂಬಂಧವನ್ನೂ ಇಲ್ಲಿ ವಿವೇಚಿಸಲಾಗಿದೆ.
ಶಿವನ ಉಪಾಸನೆಗೆ ಸುಪ್ರಸಿದ್ಧ ಮಾಧ್ಯಮವಾಗಿದೆ ನಾಟ್ಯವಿಶಾರದನಾದ ನಟರಾಜನ ರೂಪ. ನಟರಾಜನ ನೃತ್ಯದ ಏಳುಪ್ರಕಾರಗಳಲ್ಲಿ ಮೊದಲನೆಯದಾದ ಆನಂದತಾಂಡವವು ಉಳಿದೆಲ್ಲ ತಾಂಡವಗಳ ಫಲಶ್ರುತಿಯಾಗಿದ್ದು ಶಿವೋಪಾಸಕರಿಗೆ ಬಹಳ ಮಹತ್ತ್ವದ್ದಾಗಿರುವುದರಿಂದ ಆ ಮೂರ್ತಿಯ ಕುರಿತಾದ ವಿವರಣೆಯನ್ನೇ ವಿಸ್ತಾರವಾಗಿ ಇಲ್ಲಿ ಮಾಡಲಾಗಿದೆ. ಅಂತಹ ನಟರಾಜಮೂರ್ತಿಯ ಶಿಲ್ಪದ ಪರಿಚಯವನ್ನೂ, ಅದು ಸೂಚಿಸುವ ಗಾಢವಾದ ಆಧ್ಯಾತ್ಮಿಕ ಅರ್ಥಗಳ ವಿಸ್ತಾರವಾದ ನೋಟವನ್ನೂ ನೀಡುವುದು ಮುಂದಿನ ಅಧ್ಯಾಯ.
ಭಾರತದ ಎಲ್ಲ ನಿಗೂಢ ಸಂಪ್ರದಾಯಗಳೂ ನಟರಾಜ ಮತ್ತು ಆತನ ನೃತ್ಯದೊಂದಿಗೆ ವ್ಯಾಕರಣಕ್ಕಿರುವ ಸಂಬಂಧವನ್ನು ಏಕಮತಿಯಿಂದ ಒಪ್ಪಿವೆ. ಅನೇಕರಲ್ಲಿ ಕೌತುಕವನ್ನುಂಟುಮಾಡುವ ಈ ಎರಡು ವಿಭಿನ್ನ ವಿಷಯಗಳ ಮಧ್ಯೆ ಇರುವ ಸಂಬಂಧವನ್ನು ಶೋಧಿಸಿ ತಿಳಿಸಿಕೊಡುವುದು ’ನಟರಾಜ ಮತ್ತು ವ್ಯಾಕರಣ’ ಎಂಬ ಅಧ್ಯಾಯದ ವಿಷಯವಾಗಿದೆ.
ಯೋಗದ ಆಳವಾದ ಅನುಭವಗಳೊಂದಿಗೆ ಹೊಂದುವ ನಟರಾಜನ ಶ್ರೀಮೂರ್ತಿಯ ವಿವರಣೆಗಳನ್ನು ಪ್ರಸ್ತಾಪಿಸಿದ ನಂತರ ಆತನ ಉಪಾಸನೆಯ ವಿಧಾನವೂ ಹೇಗೆ ಈ ವಿವರಣೆಯನ್ನೇ ದೃಢೀಕರಿಸುತ್ತಿದೆ ಎಂಬತ್ತ ಓದುಗರ ಗಮನವನ್ನು ಸೆಳೆಯುವುದು ಮುಂದಿನ ಅಧ್ಯಾಯ.
ಈ ಶ್ರೀಕೊಶದ ಅನುಬಂಧವಾಗಿ ಶ್ರೀಚಕ್ರದ ಬಗೆಗೆ ವಿವರವನ್ನು ನಿಡುವ ಒಂದು ಅಧ್ಯಾಯವನ್ನೂ ಕೊಡಲಾಗಿದೆ.
ಈ ಗ್ರಂಥದ ಎಲ್ಲ ವಿಚಾರಗಳೂ ಯಾವ ಮಹಾಯೋಗಿಯ ಒಳ ಅನುಭವಗಳನ್ನು ಆಧರಿಸಿವೆಯೋ ಅಂತಹ ಮಹಾಮಹಿಮರಾದ ಶ್ರೀರಂಗಮಹಾಗುರುಗಳ ಸಂಕ್ಷಿಪ್ತ ಪರಿಚಯವನ್ನು ಗ್ರಂಥದ ಮಂಗಳಾಂತವಾಗಿ ಪ್ರಸ್ತುತಗೊಳಿಸಲಾಗಿದೆ.
ಮೂಲಗ್ರಂಥವನ್ನು ಭಾವಾನುವಾದ ಮಾಡುವಾಗ ಅತಿ ಉದ್ದ ಹಾಗೂ ಸಂಯುಕ್ತ ವಾಕ್ಯಗಳನ್ನು ಲಘು ಹಾಗೂ ಸರಳ ವಾಕ್ಯಗಳಾಗಿ ಪರಿವರ್ತಿಸಿ ಓದುಗರಿಗೆ ವಿಷಯಗ್ರಹಣವು ಸುಲಭವಾಗುವಂತೆ ಮಾಡಲಾಗಿದೆ. ಮೂಲಗ್ರಂಥವು ಹೇಳುವ ಅತಿಗಹನವಾದ ವಿಚಾರಗಳನ್ನು ಓದುಗರು ಸುಲಭವಾಗಿ ಅರ್ಥೈಸಿಕೊಳ್ಳಲು ಬೇಕಾದ ಎಲ್ಲ ಅಂಶಗಳನ್ನೂ ಒಳಗೊಂಡಿದೆ ಈ ಅನುವಾದ ಎಂಬುದನ್ನು ಸಂತೋಷದಿಂದ ತಿಳಿಸುತ್ತೇವೆ.