ಗ್ರಂಥ - ಶ್ರೀಮದ್ಭಾಗವತ ಕಥಾಮೃತಸಾರ- ಭಾಗ-2
ಪರಮ ಭಾಗವತೋತ್ತಮರೂ, ಭಕ್ತಶ್ರೇಷ್ಠರೂ ಆಗಿ ಜೊತೆಗೆ ಮಹಾ ಜ್ಞಾನಿಗಳೂ ಆಗಿದ್ದ ಶ್ರೀ ಶ್ರೀ ರಂಗಪ್ರಿಯ ಶ್ರೀಗಳವರು ಯೋಗಿವರೇಣ್ಯರಾದ ಶ್ರೀರಂಗ ಮಹಾಗುರುಗಳ ಪದತಲದಲ್ಲಿ ಕುಳಿತು ಅವರಿಂದ ಕಲಿತ ಪಾಠಪ್ರವಚನಗಳ ಮೂಲಕ ತಮ್ಮ ವೈದುಷ್ಯವನ್ನೂ, ಮೇಧೆಯನ್ನೂ ಪರಿಷ್ಕರಿಸಿಕೊಂಡು ವೃದ್ಧಿ ಪಡಿಸಿಕೊಂಡ ಮಹಾತ್ಮರು. ಇವರು ಶುಕ ಮಹರ್ಷಿಯ ಮುಖಾರವಿಂದದಿಂದ ಹೊರಬಂದ ಭಾಗವತಾಮೃತರಸವನ್ನು ತಮ್ಮ ಅನುಭವರಸದೊಡನೆ ಬೆರೆಸಿ ಲೋಕಕ್ಕೆ ಪ್ರವಚನಮಾಲಿಕೆಯ ರೂಪದಲ್ಲಿ ಅನುಗ್ರಹಿಸಿರುವುದು ನಮ್ಮೆಲ್ಲರ ಸೌಭಾಗ್ಯವೇ ಆಗಿದೆ. ಈ ಪ್ರವಚನಗಳನ್ನು ಬರಹ ರೂಪಕ್ಕಿಳಿಸಿ ಓದುಗರ ಮುಂದಿಡುವ ಮಹತ್ಕಾರ್ಯವನ್ನು ಶ್ರೀಮಂದಿರವು ಕೈಗೊಂಡು ಮೊದಲ ನಾಲ್ಕು ಸ್ಕಂಧಗಳ ಪ್ರವಚನಗಳನ್ನು ಮೊದಲನೆಯ ಭಾಗದಲ್ಲಿ ಪ್ರಕಾಶ ಪಡಿಸಿದೆ. ಎರಡನೆಯ ಭಾಗದಲ್ಲಿ 5 ರಿಂದ 9ನೆಯ ಸ್ಕಂಧದ ವರೆಗಿನ ಪ್ರವಚನಗಳನ್ನು ಪ್ರಸ್ತುತಗೊಳಿಸಲಾಗಿದೆ.
ಇಲ್ಲಿ ಶ್ರೀಗಳವರು ಆರಿಸಿಕೊಂಡಿರುವ ಕಥಾಭಾಗಗಳು ಅತ್ಯಂತ ಪ್ರಸಿದ್ಧವೇ ಆಗಿದ್ದರೂ ಪ್ರವಚನದಲ್ಲಿನ ವೈಶಿಷ್ಟ್ಯವೇನೆಂದರೆ ಕಥೆಯ ಹಿಂದಿರುವ ಗೂಢವಾದ, ಜಠಿಲವಾದ ತತ್ತ್ವಾರ್ಥಗಳನ್ನೂ ತಿಳಿಯಾದ ಮಾತುಗಳಲ್ಲಿ ತಿಳಿಸಿಕೊಟ್ಟಿದ್ದಾರೆ.
ಉದಾಹರಣೆಗೆ ಪ್ರಸಿದ್ಧವಾದ ಜಡಭರತನ ಕಥೆಯಲ್ಲಿ ‘ಗಹನವಾದ ಸಂಸಾರವನ್ನು ಒಂದು ಅರಣ್ಯಕ್ಕೆ ಹೋಲಿಸಿ ಇಲ್ಲಿರುವ ಆರು ಬಗೆಯ ಪ್ರಾಣಿಗಳು - ಕಾಮ, ಕ್ರೋಧಾದಿ ಅರಿಷಡ್ವರ್ಗಗಳು - ನಮ್ಮನ್ನು ಹೇಗೆ ಆಕ್ರಮಿಸುತ್ತಾ ಇವೆ, ಇವುಗಳನ್ನು ಹೇಗೆ ಕುಶಲತೆಯಿಂದ ದೂರ ಇಡಬೇಕು? ಕೆಲವು ಕಡೆಯಲ್ಲಿ ಹೇಗೆ ಬಲವಂತದಿಂದ ಧ್ವಂಸ ಮಾಡಬೇಕು, ಹೇಗೆ ತಪ್ಪಿಸಿಕೊಳ್ಳಬೇಕು ಎನ್ನುವ ಎಲ್ಲ ವಿಷಯಗಳನ್ನೂ ಕೂಡ ಜಡಭರತನು ರಾಜನಿಗೆ ವಿಶದವಾಗಿ ತಿಳಿಯಪಡಿಸಿ ಅಧ್ಯಾತ್ಮ ಜ್ಞಾನವನ್ನು ತುಂಬುತ್ತಾನೆ’ ಎಂದು ನಾವು ಗಮನಿಸ ಬೇಕಾದ ಅಂಶಗಳು ಎದ್ದು ತೋರುವಂತೆ ವಿವರಿಸಿದ್ದಾರೆ.
ಅಂತೆಯೇ ಪ್ರಹ್ಲಾದನ ಚರಿತ್ರೆಯ ವಿಚಾರದಲ್ಲಿ ಒಂದು ಹೊಸ ನೋಟ! – “ಸ್ವಾಮಿ ಶ್ರೀ ನೃಸಿಂಹನು ಯೋಗಿಗಳಿಗೆ ಅಂತರಂಗದಲ್ಲಿ ಗೋಚರಿಸಿದ ಮತ್ತು ಗೋಚರಿಸುವ ಮಂಗಲ ಮೂರ್ತಿ” ಎಂಬ ಘೋಷಣೆ. “ಮಹಾಗುರುವು ಅಪ್ಪಣೆ ಕೊಡಿಸಿದಂತೆ, ಪ್ರಹ್ಲಾದನ ಚರಿತ್ರೆಯನ್ನು ಹೇಗೆ ವರ್ಣನೆ ಮಾಡಿದ್ದಾರೋ ಅದೆಲ್ಲವನ್ನೂ ಒಳಗಡೆ ಯೋಗಮಾರ್ಗದಲ್ಲಿ ನೋಡಬಹುದು. ಹಿರಣ್ಯಕಶಿಪುವಿನಂತಹ ಭಯಂಕರರೂ ಇದ್ದಾರೆ. ಶ್ರೀನರಸಿಂಹ ದೇವನೂ ಇದ್ದಾನೆ. ಇವೆಲ್ಲಾ ಅಂತಃಪ್ರಪಂಚದಲ್ಲಿ ಸಾಕ್ಷಾತ್ ದರ್ಶನಕ್ಕೆ ವಿಷಯಗಳು. ಎಂದೋ ನಡೆದ ಕಥೆಯಲ್ಲ. ಎಂದೆಂದಿಗೂ ನಡೆಯುತ್ತಿರುವ, ನಡೆಯಬಹುದಾದ ಕಥೆ” ಎಂಬ ಸತ್ಯರ್ಥದ ಪ್ರಕಟಣೆ ಮತ್ತೆಲ್ಲೂ ಸಿಗದ, ಅನುಭವಿಗಳಾದ ಯೋಗಿಗಳು ಮಾತ್ರವೇ ಹೇಳ ಬಹುದಾದ ಹೊಸ ವಿಚಾರ.
ಮತ್ತೊಂದು ಸ್ವಾರಸ್ಯವಾದ ಆಖ್ಯಾನ ಅಜಾಮಿಳನದು. ಇಲ್ಲಿ ಅನೇಕರು ಭಾಗವತಪೆÇ್ರೀಕ್ತವಾದ ಕಥೆಯ ಒಂದು ಪಾಶ್ರ್ವವನ್ನು ಮಾತ್ರವೇ ಹೇಳಿ ಅದರ ಮೂಲಕ ನಾಮೋಚ್ಛಾರಣೆಯ ವಿಚಾರದಲ್ಲಿ ಅಪಾರ್ಥವನ್ನು ಕಲ್ಪಿಸುತ್ತಿರುವುದನ್ನು ತಿಳಿಸಿ ಎಚ್ಚರಿಸುತ್ತಾರೆ. ಅಷ್ಟುಮಾತ್ರವೇ ಅಲ್ಲದೆ ನಾಮೋಚ್ಛಾರಣೆಯ ನಿಜಾರ್ಥವನ್ನೂ ಮಹಾಗುರುಗಳು ಕೋಟ್ಟ ನೋಟದಂತೆ ವಿವರಿಸಿ ನಮ್ಮ ಕಣ್ಣುಗಳನ್ನು ತೆರೆದಿದ್ದಾರೆ.
ಹೀಗೆ ಅನೇಕ ಅಪರೂಪವಾದ ವಿಶೇಷಾಂಶಗಳನ್ನು ಒಳಗೊಂಡಿರುವ ಅದ್ಭುತವಾದ ಗ್ರಂಥವಾಗಿದೆ ಈ ಹೊತ್ತಿಗೆ. ವಿಷಯದ ದೃಷ್ಟಿಯಿಂದ ಅತ್ಯಮೂಲ್ಯವಾದದ್ದಾದರೂ ಅತ್ಯಲ್ಪ ದರದಲ್ಲಿ ಸಿಗುವ ಗ್ರಂಥವಾಗಿದೆ ಎಂಬುದು ಗಮನಾರ್ಹವಾಗಿದೆ.