ಗ್ರಂಥ - ಶ್ರೀಮದ್ಭಾಗವತ ಕಥಾಮೃತಸಾರ- ಭಾಗ-1 ಶ್ಶ್ರೀಮದ್ಭಾಗವತವು ಭಾರತೀಯ ಸಾಹಿತ್ಯದಲ್ಲಿ ಅತ್ಯಂತ ಉನ್ನತವಾದ ಸ್ಥಾನವನ್ನು ಗಳಿಸಿರುವ “ಪುರಾಣರತ್ನ”ವೆಂಬ ಅಗ್ಗಳಿಕೆಯನ್ನು ಪಡೆದಿದೆ.ಶ್ರೀ ವಲ್ಲಭಾಚಾರ್ಯರು “ವೇದವ್ಯಾಸರ ಸಮಾಧಿಭಾಷೆ” ಎಂಬುದಾಗಿ ಕೊಂಡಾಡಿದ್ದಾರೆ.ಇದು ಹನ್ನೆರೆಡು ಸ್ಕಂಧಗಳನ್ನು ಹೊಂದಿರುವ ಮಹಾಗ್ರಂಥವಾಗಿದೆ.ಇದು ಪ್ರಭು ಸಮ್ಮಿತ,ಮಿತ್ರ ಸಮ್ಮಿತ ಮತ್ತು ಕಾಂತಾ ಸಮ್ಮಿತ ಎಂಬ ಮೂರು ರೀತಿಗಳಲ್ಲಿಯೂ ಉಪದೇಶವನ್ನು ನೀಡಿ, ಜನರನ್ನು ಉದ್ಧರಿಸುವ ಗ್ರಂಥವಾಗಿದೆ. ಈ ಗ್ರಂಥವು ದಿವ್ಯವಾಗಿ, ಭವ್ಯವಾಗಿ, ಪರಮಾತ್ಮನಿಗೆ ಪ್ರಿಯತಮವಾಗಿರುವುದಾಗಿದೆ.ಶ್ರೀ ಕೃಷ್ಣಪರಮಾತ್ಮನ ಶಬ್ದರೂಪವಾದ ದೇಹವೇ ಇದಾಗಿದೆ. ಇದರ ಲೇಖಕರು ಶ್ರೀ ಶ್ರೀ ರಂಗಪ್ರಿಯ ಸ್ವಾಮಿಗಳು. ಭಕ್ತಿ –ಜ್ಞಾನ- ವೈರಾಗ್ಯಗಳ ನಿಧಿಯಾಗಿದ್ದರು. ಶ್ರೀರಂಗಮಹಾಗುರುಗಳ ಪದತಲದಲ್ಲಿ ಅಭ್ಯಸಿಸಿ ಪಾಂಡಿತ್ಯವನ್ನು ಪಡೆದಿದ್ದ ಮಹಾವಿದ್ವಾಂಸರಾಗಿದ್ದರು. ಇಂತಹ ಅತ್ಯದ್ಭುತ ಕಾವ್ಯರತ್ನವನ್ನು ಕುರಿತ ಪ್ರವಚನÀ ಮಾಲಿಕೆಯಲ್ಲಿ ಸುಮಾರು 58 ಪ್ರವಚನಗಳು ಅಡಕವಾಗಿವೆ.ಇವುಗಳ ವೈಶಿಷ್ಟ್ಯವೆಂದರೆ ಕಥಾಭಾಗವನ್ನು ರಸಪೂರ್ಣವಾಗಿ ಚಿತ್ರಿಸಿ, ಶ್ರೀರಂಗಮಹಾಗುರುಗಳಿತ್ತ ಸಂಸ್ಕಾರ ಮತ್ತು ದೃಷ್ಟಿಕೋನದ ಆಧಾರದಮೇಲೆ ಕಥೆಗಳಲ್ಲಿ ಅಡಗಿರುವ ತತ್ತ್ವಾರ್ಥಗಳನ್ನೂ ಸಹ ಹೃದಯಂಗಮವಾಗಿ ವಿವರಿಸಿದ್ದಾರೆ. ತಮ್ಮ ಪ್ರವಚನಮಾಲಿಕೆಯಲ್ಲಿ ಹನ್ನೆರಡು ಸ್ಕಂಧಗಳಲ್ಲಿ ಮೊದಲ ಒಂಭತ್ತು ಸ್ಕಂಧಗಳಲ್ಲಿನ ಸಾರಿಷ್ಠವಾದ ಭಾಗಗಳನ್ನೂ, ಕಥಾನಕಗಳನ್ನೂ ಸಂಕ್ಷೇಪವಾಗಿ ಹೇಳಿ, ಶ್ರೀಕೃಷ್ಣಾವತಾರವನ್ನು ವರ್ಣಿಸುವ ದಶಮಸ್ಕಂಧವನ್ನು ಸವಿಸ್ತಾರವಾಗಿ ವಿವರಿಸಿ, ಉಳಿದ ಎರಡು ಸ್ಕಂಧಗಳ ಪ್ರಧಾನ ಅಂಶಗಳನ್ನೂ ವಿವರಿಸಿದ್ದಾರೆ. ಪ್ರಕೃತ ಈ ಪ್ರವಚನ ಮಾಲಿಕೆಯು ಮೊದಲ ನಾಲ್ಕು ಸ್ಕಂಧಗಳನ್ನು ಕುರಿತಾದ ಪ್ರವಚನಗಳನ್ನೊಳಗೊಂಡಿದೆ. ಜ್ಞಾನತಮವಾದ, ಅಧ್ಯಾತ್ಮ ತತ್ತ್ವಗಳನ್ನು, ಕೆಲವೊಮ್ಮೆ ಕಥೆಗಳ ಮೂಲಕವಾಗಿ, ಕೆಲವೊಮ್ಮೆ ಉದಾಹರಣೆಗಳ ಮೂಲಕವಾಗಿ, ಸಾಮಗ್ರಿಗಳ ಮೂಲಕವಾಗಿ, ಪ್ರತಿಮೆಗಳ ಮುಲಕವಾಗಿ ಸಾಕ್ಷಾತ್ ವಿಷಯವನ್ನು ಪ್ರತಿಪಾದನೆಯನ್ನು ಮಾಡಿದ್ದಾರೆ.ಇದು ಶ್ರೀಮದ್ಭಾಗವತ ಕಥಾಮೃತಸಾರದ ವೈಶಿಷ್ಟ್ಯವಾಗಿದೆ.