ಗ್ರಂಥ - ಜೀವನ ಮತ್ತು ಅಮರ ಸಂಸ್ಕೃತಿ (Jeevana matthu Aamara Samskruti) ದಿ| ವಿದ್ವಾನ್ ಶ್ರೀ ಛಾಯಾಪತಿಗಳ ಸುಮಾರು ೨೨೦ ಪುಟಗಳ ಈ ಹೊತ್ತಿಗೆಯು ನಮಗೆ ಜೀವನದ ಮತ್ತು ಭಾರತೀಯರ ಬದುಕನ್ನು ಸಾರ್ಥಕವಾಗಿ ಕಟ್ಟಿ ಬೆಳೆಸಿದ ಅಮರವಾದ ಆರ್ಷ ಸಂಸ್ಕೃತಿಯ ಪರಿಚಯವನ್ನು ಮಾಡಿಸುವುದಾಗಿದೆ. ಆರು ಅಧ್ಯಾಯಗಳನ್ನು ಹೊಂದಿ ಸಮಗ್ರ ಆರ್ಷ ಚಿಂತನೆಯನ್ನು ಅತ್ಯಂತ ಸಂಕ್ಷಿಪ್ತವಾಗಿ ನಿರೂಪಿಸುವಲ್ಲಿ ಯಶಸ್ವಿಯಾಗಿರುವ ಗ್ರಂಥ ಕುಸುಮವಿದು. ಮೊದಲ ಅಧ್ಯಾಯ- ಅಮರ ಸಂಸ್ಕೃತಿ. ಮಾನವ ಜೀವನದ ಒಳ ಸೌಂದರ್ಯವೇ ಸಂಸ್ಕೃತಿ. ಅದರ ಮುಂದುವರಿಕೆಯಾಗಿ ಅದನ್ನು ಅರ್ಥ ಮಾಡಿಕೊಂಡು ಪುರುಷಪ್ರಯತ್ನದಿಂದ ರೂಪಿಸಿಕೊಳ್ಳುವ ಹೊರ ಜೀವನದ ನಡೆಯೇ ನಾಗರೀಕತೆ. ಮಾವಿನ ಬೀಜದಿಂದ ವಿಕಾಸವಾಗುವ ಮಾವಿನ ಮರವನ್ನು ಮಾವು ಎಂದೇ ಕರೆಯುವಂತೆ ಸಂಸ್ಕೃತಿಯ ವಿಸ್ತಾರವಾದ ನಾಗರೀಕತೆಯನ್ನು ಸಂಸ್ಕ್ರುತಿಯೆಂದೇ ಭಾವಿಸಿ ವ್ಯವಹರಿಸಿರುವುದುಂಟು. ಸಂಸ್ಕೃತಿಯ ಬೇರು ಪರಮಾತ್ಮ ಜ್ಯೋತಿಯೇ ಆಗಿರುವುದರಿಂದ ಆಮೂಲವಾಗಿಯೇ ವಿಕಾಸಗೊಂಡ ಆರ್ಷ ಸಂಸ್ಕೃತಿಯೂ ಅಮರಸಂಸ್ಕೃತಿಯೇ ಆಗುತ್ತದೆ. ಎರಡನೆಯ ಅಧ್ಯಾಯ- ಜೀವನ ಮತ್ತು ಧರ್ಮ. ಜೀವನದ ತಾಯಿ ಬೇರು ಧರ್ಮ.ಅದರ ಅಭಿವ್ಯಕ್ತಿಗೆ ಬೇಕಾದ ಸ್ಥಿತಿ ವಿಶೇಷವನ್ನೂ (ಕಂಡೀಶನ್) ಧರ್ಮ ಎಂದರು. ಕಳಚಿದ ಆ ಸ್ಥಿತಿಯನ್ನು ಸಂಪಾದಿಸುವುದಕ್ಕೂ,ಸಾಧನವಾದ ಸಂಸ್ಕಾರ, ಆಚಾರ ಮೊದಲಾದ ಕ್ರಿಯಾಕಲಾಪಗಳನ್ನೂ ಧರ್ಮವೆಂದೇ ಕರೆದರು. ಇವೆಲ್ಲ ಕಲೆತು ಜೀವನ ಧರ್ಮಮಯವಾಗಲಿ ಎಂಬ ಭಾರತ ಮಹರ್ಷಿಗಳ ಆಶಯವನ್ನು ಲೇಖಕರು ಸರಳ ಸುಂದರವಾಗಿ ನಿರೂಪಿಸಿದ್ದಾರೆ. ಮೂರನೆಯ ಅಧ್ಯಾಯ- ಜೀವನ ಮತ್ತು ಕಾಮ. ಸೃಷ್ಟಿ ವಿಸ್ತಾರಕ್ಕೆ ಒಂದು ಆದರ್ಶ ಕಾಮವು ದಾರಿ ಮಾಡಿದರೆ,ವಿಸ್ತಾರದಿಂದ ಮೂಲಕ್ಕೆ ಸಾಗಬೇಕಾದರೂ ಒಂದು ಕಾಮವಿರಬೇಕು.ಒಂದು ಸೃಷ್ಟಿಕಾಮವಾದರೆ ಮತ್ತೊಂದು ಆತ್ಮಕಾಮ. ಇವು ಪರಸ್ಪರ ಅವಿರೋಧವಾಗಿದ್ದಾಗ ಜೀವನ. ಇಲ್ಲವಾದರೆ ಕೇವಲ ವನ. ದಾರಿ ತಪ್ಪಿಸುವ ಗೊಂಡಾರಣ್ಯ! ಅಂತಹ ಕಾಮವನ್ನು ಜೀವನದಲ್ಲಿ ಹೇಗೆ ಇಟ್ಟುಕೊಳ್ಳಬೇಕೆಂಬುದರ ದಿಗ್ದರ್ಶನವಿದೆ. ನಾಲ್ಕನೆಯ ಅಧ್ಯಾಯ-ಜೀವನ ಮತ್ತು ವಿದ್ಯೆ. ಜೀವನವು “ಜೀವ”ನ ವಿಹಾರ ಸ್ಥಾನವಾಗಿ ಆಗಬೇಕಾದರೆ ಸೃಷ್ಟಿ ವಿದ್ಯೆ, ಸ್ಥಿತಿ ವಿದ್ಯೆ ಮತ್ತು ಲಯ ವಿದ್ಯೆಗಳು ಅರ್ಥವಾಗಿರಬೇಕು. ವಿದ್ಯತೇ ಇತಿ ವಿದ್ಯಾ ಎಂಬಂತೆ,ಆತ್ಮನಿಂದ ಹೊರ ಹೊಮ್ಮಿ ಸೃಷ್ಟಿ,ಸ್ಥಿತಿ,ಲಯಗಳ ಸೂತ್ರದಲ್ಲಿ ಸುಸೂತ್ರವಾಗಿ ನಡೆದು ಮತ್ತೆ ವಿದ್ಯಾಮೂಲವಾದ ಪರಮಾತ್ಮನಲ್ಲಿ ಲಯವಾಗುವುದಾದರೆ ಅದೇ ಸದ್ವಿದ್ಯೆ. ಅಂತಹ ಸದ್ವಿದ್ಯೆಯ ವಿಷಯವನ್ನು ಅಲಂಕರಿಸಿದ ಅಧ್ಯಾಯವಿದು. ಐದನೆಯ ಅಧ್ಯಾಯ –ಮಹರ್ಷಿಗಳ ವಿದ್ಯೆ. ಅಂತಹ ಸೃಷ್ಟಿಯಲ್ಲೇ ನಿಗೂಢವಾಗಿರುವ ವಿದ್ಯೆಯನ್ನು ಅದರ ಮರ್ಮವರಿತು ಲೋಕಕ್ಕೆ ಅನುಗ್ರಹಿಸಿದವರು ಸನಾತನ ಭಾರತ ಮಹರ್ಷಿಗಳು.ಅವರು ಅರುಹಿದ ಅಮರವಾದ ವಿದ್ಯಾ ಸ್ವರೂಪವೇ ಮಹರ್ಷಿಗಳ ವಿದ್ಯೆ. ಆರನೆಯ ಅಧ್ಯಾಯ-ಮಾನವ ಮತ್ತು ಸಾಹಿತ್ಯ. ಸೃಷ್ಟೀಷನ ಆಶಯದ ಸಹಿತವಾಗಿ ವ್ಯಕ್ತಗೊಂಡಾಗ ಅದು ಸಾಹಿತ್ಯವಾಗುತ್ತದೆ. ರಸರೂಪಿಯಾದ ಪರಮಾತ್ಮನನ್ನು ಹೊತ್ತು ತರುವಂತಿದ್ದಾಗ ಅದುವೇ ಸಾಹಿತ್ಯ. ಇಲ್ಲವೇ ರಾಹಿತ್ಯ. ಈ ದೃಷ್ಟಿಯಲ್ಲಿ ಸಾಹಿತ್ಯದ ಪರಿಚಯ ಮಾಡಿಸುವ ಅದ್ಭುತವಾದ ವಿಷಯ ಈ ಅಧ್ಯಾಯದಲ್ಲಿ ಅಡಕವಾಗಿದೆ. ಪುಜ್ಯರಾದ ಛಾಯಾಪತಿಗಳು ಮಹಾಮಹಿಮರಾದ ಶ್ರೀರಂಗಮಹಾಗುರುಗಳ ಶಿಷ್ಯರಾಗಿ ಅವರ ಪದತಲದಲ್ಲಿ ಕುಳಿತು ಅದ್ವಿತೀಯವಾದ ಅವರ ವಿಚಾರಸರಣಿಯಲ್ಲಿ ಮಿಂದು ಅರುಹಿದ ಅಮೂಲ್ಯ ವಿಚಾರಗಳನ್ನೊಳಗೊಂಡ ಗ್ರಂಥ ಕುಸುಮವಿದಾಗಿದೆ. ಓದುಗರು ಅದರ ಸವಿಯನ್ನು ಅನುಭವಿಸಿ ಧನ್ಯರಾಗುವುದರಲ್ಲಿ ಸಂಶಯವಿಲ್ಲ.