ಗ್ರಂಥ - ಶ್ರಾದ್ಧ-ಪಿತೃಪೂಜೆ (Shraddha-pitrupuje)
ಪೂಜೆ ಮಾಡುವುದು ನಮ್ಮ ದೇಶದ ಸಂಪ್ರದಾಯದಲ್ಲಿ ಅನಾದಿಕಾಲದಿಂದಲೂ ಅನೂಚಾನವಾಗಿ ಬೆಳೆದುಬಂದ ವಿಷಯವಾಗಿದೆ. ಪಿತೃದೇವತೆಗಳ ಪೂಜೆಯನ್ನು “ಶ್ರಾದ್ಧ”ಎಂಬ ಪದದಿಂದ ಕರೆಯುತ್ತಾರೆ. ಪರ್ಯಾಯವಾಗಿ ತಿಥಿ, ತದ್ದಿನ, ದಿನ, ದೆವಸಂ, ತಿರುವಧ್ಯಯನಂ, ವಿಶೇಷ, ಹೆಚ್ಚುಕಟ್ಟಳೆ, ಪಿತೃಕರ್ಮ ಮುಂತಾದ ನಾಮಧೇಯಗಳಿಂದಲೂ ಕರೆಯುತ್ತಾರೆ. ಶ್ರದ್ಧೆಯಿಂದ ಆಚರಿಸುವುದೇ ಶ್ರಾದ್ಧ. ಇನ್ನೂ ಕೆಲವರು, ಈ ಪದ್ಧತಿ ಬಹಳ ಹಳೆಯದು. ಈಗ ಆಧುನಿಕ ವಿಜ್ಞಾನದಲ್ಲಿ ಬರುತ್ತಿರುವ ಹೊಸ ಹೊಸ ಶೋಧನೆಗಳನ್ನು ಅನುಸರಿಸಬೇಕು ಎಂಬ ಸಲಹೆ ನೀಡುತ್ತಾರೆ. ಆದರೆ “ಪುರಾಣಮಿತ್ಯೇವ ನ ಸಾಧು ಸರ್ವಂ”, ಹಳೆಯದು ಎಂಬ ಕಾರಣದಿಂದಲೇ ಸರಿಯಿಲ್ಲ ಎಂಬುದನ್ನು ಸಾವಿರಾರು ವರ್ಷಗಳ ಹಿಂದೆಯೇ ಕಾಳಿದಾಸನು ಹೇಳಿದ್ದಾನೆ. ಯಾವುದನ್ನು ಪ್ರಾಮಾಣಿಕವಾದ ವಿಚಾರಪರತೆ ಒಪ್ಪುವುದೋ ಮತ್ತು ಪ್ರಯೋಜನಕ್ಕೆ ಬರುವುದಾದರೆ ಅದನ್ನು ಹಳೆಯದಾಗಿರಲೀ, ಹೊಸದಾಗಿರಲೀ ಒಪ್ಪಿ ಆಚರಿಸಬೇಕು. ಈ ಪುಸ್ತಕವು ಅತ್ಯಂತ ಅನಿವಾರ್ಯವೇ ಆಗಿರುವುದು ಏಕೆಂದರೆ, ಈಗಿನ ಕಾಲದಲ್ಲಿ ಶ್ರಾದ್ಧದ ಪದ ಕೇಳಿದರೆ ಅತ್ಯಂತ ಭಯಪಡುವವರು ಇದ್ದಾರೆ ಮತ್ತೆ ಕೆಲವರು ಹಾಸ್ಯ ಮತ್ತು ಕುಚೋದ್ಯ ಮಾಡುವವರೂ ಇದ್ದಾರೆ. ಲೇಖಕರು ಇವುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅನೇಕ ಶಾಸ್ತ್ರವಾಕ್ಯಗಳನ್ನು ಉದಾಹರಿಸಿದ್ದಾರೆ ಮತ್ತು ಪ್ರಶ್ನೋತ್ತರ ರೂಪದಲ್ಲಿ ವಿವರಿಸಿದ್ದಾರೆ. ಭಾಷೆ ಸರಳವಾಗಿದ್ದು ಸಾಮಾನ್ಯರಿಗೂ ಅರ್ಥವಾಗುವಂತಿರುವುದು ಇದರ ವಿಶೇಷ. ಕೆಲವು ಶಾಸ್ತ್ರವಾಕ್ಯಗಳನ್ನು ನೋಡುವುದಾದರೆ, ಶ್ರಾದ್ಧವನ್ನು ಮಾಡದೇ ಇರುವವರ ಮನೆಗಳಲ್ಲಿ ವೀರರೂ, ಆರೋಗ್ಯವಂತರೂ, ದೀರ್ಘಾಯುಷ್ಮಂತರೂ ಹುಟ್ಟುವುದಿಲ್ಲ ಮತ್ತು ಶ್ರೇಯಸ್ಸನ್ನೂ ಪಡೆಯುವುದಿಲ್ಲ.
ಶ್ರಾದ್ಧವನ್ನು ಆಚರಿಸುವವರು ಆಧ್ಯಾತ್ಮಿಕ ಫಲಗಳನ್ನು ಮಾತ್ರವಲ್ಲದೇ ಲೌಕಿಕವಾದ ಫಲಗಳನ್ನೂ, ಶ್ರೇಯಸ್ಸನ್ನೂ ಪಡೆಯುತ್ತಾರೆ. ಗೃಹಸ್ಥನಾದರೂ ಮುಕ್ತಿಯನ್ನು ಪಡೆಯುತ್ತಾನೆ. ಪ್ರಸ್ತುತ ಲೇಖಕರು ಈ ಪುಸ್ತಕದಲ್ಲಿ ಅನೇಕ ವಿಷಯಗಳ ಬಗ್ಗೆ ವಿಚಾರಮಾಡಿ ತಿಳಿಸಿದ್ದಾರೆ. ನಾವು ಕೆಲವು ವಿಷಯಗಳನ್ನು ಸಂಕ್ಷಿಪ್ತವಾಗಿ ನೋಡುವವರಾಗಿದ್ದೇವೆ. ಪಿತೃದೇವತೆಗಳು ಯಾರೆಂದರೆ ವಸು,ರುದ್ರ, ಆದಿತ್ಯರು ಎಂದು ಕರೆಯಲ್ಪಡುತ್ತಾರೆ. ಪಿತೃವನ್ನು ವಸುವೆಂದೂ, ಪಿತಾಮಹನನ್ನು ರುದ್ರನೆಂದೂ, ಪ್ರಪಿತಾಮಹನನ್ನು ಅದಿತ್ಯನೆಂದೂ ಭಾವಿಸಿ ಆರಾಧಿಸಬೇಕು ಎಂದು ಸ್ಮೃತಿಗಳು ಹೇಳುತ್ತವೆ. ಇವರುಗಳನ್ನು ಆವಾಹಿಸಬಹುದು, ಆದರೆ ನೋಡಲು ಸಾಧ್ಯವೇ? ಎಂದರೆ, ದೇವತೆಗಳನ್ನು ನೋಡುವ ಜ್ಞಾನದೃಷ್ಟಿಯನ್ನು ಪಡೆದುಕೊಂಡರೆ ಸಾಧ್ಯವಾಗುತ್ತದೆ. ಇನ್ನು ಪಿತೃಪೂಜೆಯಲ್ಲಿ ಪಿತೃದೇವತೆಗಳು, ವಿಶ್ವೇದೇವರು ಮತ್ತು ವಿಷ್ಣು ಈ ಮೂವರನ್ನು ಪೂಜಿಸಲಾಗುತ್ತದೆ. ಇದರಲ್ಲಿ ವಿಶ್ವೇದೇವರು, ಪಿತೃದೇವತೆಗಳ ರಕ್ಷಕ ಮಿತ್ರರಾಗಿಯೂ, ಮಹಾವಿಷ್ಣುವು ಶ್ರಾದ್ಧಸಂರಕ್ಷಕ ದೇವತೆಯಾಗಿಯೂ ಪೂಜಿಸಲ್ಪಡುತ್ತಾರೆ. ವರಣಕ್ಕೆ ಎಷ್ಟುಮಂದಿ ಎಂದರೆ, ಮೂವರು, ಐದು ಅಥವಾ ಏಳು ಮಂದಿಯನ್ನು ನಿಮಂತ್ರಿಸಬೇಕು. ನಿಮಂತ್ರಣಕ್ಕೆ ಯೋಗ್ಯರು ಯಾರು ಎಂಬುದನ್ನು ವಿಚಾರಮಾಡಿದಾಗ, ಸಂನ್ಯಾಸಿ, ಗೃಹಸ್ಥ ಮತ್ತು ಬ್ರಹ್ಮಚಾರಿ ದೊರೆತರೆ ಅವರಲ್ಲಿ ಸಂನ್ಯಾಸಿಯನ್ನು ಪಿತೃಸ್ಥಾನಕ್ಕೂ, ಗೃಹಸ್ಥನನ್ನು ವಿಶ್ವೇದೇವರ ಸ್ಥಾನಕ್ಕೂ ಮತ್ತು ಬ್ರಹ್ಮಚಾರಿಯನ್ನು ವಿಷ್ಣುಸ್ಥಾನಕ್ಕೂ ನಿಮಂತ್ರಿಸಬೇಕು. ಕಾಲನಿರ್ಣಯ ಅತಿ ಮುಖ್ಯವಾದದ್ದು. ಒಂದೇ ದಿವಸದಲ್ಲಿ ಪಾರ್ವಣಶ್ರಾದ್ಧ ಮತ್ತು ಏಕೋದ್ದಿಷ್ಟ ಶ್ರಾದ್ಧಗಳು ಒದಗಿಬಂದರೆ, ಮೊದಲು ಪಾರ್ವಣಶ್ರಾದ್ಧವನ್ನು ಆಚರಿಸಿ ಅನಂತರ ಏಕೋದ್ದಿಷ್ಟ ಆಚರಿಸಬೇಕು. ತಾಯಿ ಮತ್ತು ತಂದೆಯವರ ಶ್ರಾದ್ಧವು ಒಂದೇ ದಿವಸ ಬಂದರೆ, ಮೊದಲು ತಂದೆಯವರ ಶ್ರಾದ್ಧವನ್ನು ಆಚರಿಸಿ ಅನಂತರ ತಾಯಿಯವರ ಶ್ರಾದ್ಧವನ್ನು ಆಚರಿಸಬೇಕು.
ಲೇಖಕರು ಪಾಕ, ಭೋಜನ ನಿಯಮ, ವಾಯಸಬಲಿ, ಕರ್ತೃವಿನ ನಿಯಮಗಳು ಇತ್ಯಾದಿಗಳನ್ನು ಅತ್ಯಂತ ಕೂಲಂಕಷವಾಗಿ ವಿಚಾರಮಾಡಿದ್ದಾರೆ. ಲೇಖಕರು ಶಾಸ್ತ್ರಪಾಂಡಿತ್ಯ, ಪ್ರವಚನ, ಅಧ್ಯಾಪನ ಇತ್ಯಾದಿ ಪಾಂಡಿತ್ಯಗಳನ್ನು ಪಡೆದಿದ್ದರು. ಅದ್ಭುತ ವಾಗ್ಮಿಗಳು, ಮೇಧಾವಿಗಳು, ನಡೆದಾಡುವ ಗ್ರಂಥಾಲಯವಾಗಿದ್ದರು. ಇವರು, ಅದ್ಭುತಯೋಗೈಶ್ವರ್ಯ ಸಂಪನ್ನರೂ, ಪರಮ ಕಾರುಣ್ಯಪರಿಪೂರ್ಣರೂ ಆದ ಶ್ರೀರಂಗಮಹಾಗುರುಗಳ ಶಿಷ್ಯರಾಗಿ, ಅವರ ಪದಕಮಲದಲ್ಲಿ ಅಭ್ಯಸಿಸಿದ ಮಹಾವಿದ್ವಾಂಸರಾಗಿದ್ದರು.
ಪ್ರಶ್ನೋತ್ತರ ರೂಪದಲ್ಲಿರುವ ಈ ಹೊತ್ತಗೆಯು ಪ್ರಾಚೀನ ಮತ್ತು ಅರ್ವಾಚೀನ ವಿಚಾರವಂತರಿಗೆಲ್ಲರಿಗೂ ದಿಗ್ದರ್ಶನ ರೂಪವಾಗಿದೆ. ಆಧುನಿಕರು ಕೇಳುವ ಪ್ರಶ್ನೆಗಳನ್ನೂ ತೆಗೆದುಕೊಂಡು ಪೂಜ್ಯ ಸ್ವಾಮಿಗಳು ಸೂಕ್ತ ಸಮಾಧಾನವನ್ನು ನೀಡಿದ್ದಾರೆ ಎಂದೇ ಎಲ್ಲರೂ ಓದಬೇಕಾದ ಪುಸ್ತಕವೆನ್ನುವುದರಲ್ಲಿ ಸಂಶಯವೇ ಇಲ್ಲ.