ಗ್ರಂಥ - ಪೂಜೆ – ಒಂದು ಮಹರ್ಷಿ ನೋಟ
ಭಗವಂತನ ಪೂಜೆಯನ್ನು ಇಂದು ಮನೆ ಮನೆಗಳಲ್ಲಿಯೂ ಪ್ರತಿನಿತ್ಯವೂ ನಡೆಸುತ್ತಿದ್ದರೂ ಈ ವಿಷಯಕವಾಗಿ ಸರಿಯಾಗಿ ತಿಳುವಳಿಕೆ ಇಲ್ಲದಿರಿವುದರಿಂದ ಯಾಂತ್ರಿಕವಾಗಿ ಆಚರಿಸುವವರ ಸಂಖ್ಯೆಯೇ ಜಾಸ್ತಿ. ಭಗವಂತನ ಪೂಜೆಯನ್ನು ಏಕೆ ಮಾಡಬೇಕು? ಪೂಜಾ ಪದಾರ್ಥಗಳು ಯಾವುವು? ಪೂಜಿಸುವ ಕ್ರಮ ಯಾವುದು? ಅದರಿಂದ ಲಾಭ ಏನು? ಮಾಡದೆ ಇದ್ದರೆ ನಷ್ಟ ಏನು? ಇತ್ಯಾದಿ ಅನೇಕ ಪ್ರಶ್ನೆಗಳು ಆಧುನಿಕ ವಿಚಾರಪರರ ಮನಸ್ಸನ್ನು ಕಾಡುತ್ತಿರುತ್ತದೆ. ಇವುಗಳಿಗೆ ಸರಿಯಾದ ಉತ್ತರ ದೊರಕದಾದ ಇಂದಿನ ಪರಿಸ್ಥಿತಿಯು ಜನರನ್ನು ನಾಸ್ತಿಕತೆಯತ್ತ ದೂಡುವ ಸಂಭವವೂ ಉಂಟು.
ಈ ಎಲ್ಲಾ ಪ್ರಶ್ನೆಗಳಿಗೂ ಸಮರ್ಪಕವಾದ ಉತ್ತರವನ್ನು ಸೂಕ್ತ ವಿವರಣೆಗಳೊಂದಿಗೆ ತಮ್ಮ ಪ್ರವಚನಗಳ ಮೂಲಕ ಅನೇಕ ಸಂದರ್ಭಗಳಲ್ಲಿ ಶ್ರೀ ಶ್ರೀ ರಂಗಪ್ರಿಯ ಶ್ರೀಪಾದ ಮಹಾದೇಶಿಕರು ದಯಪಾಲಿಸಿದ್ದರು. ಅವುಗಳನ್ನು ಸಂಗ್ರಹಿಸಿ ಲೇಖನ ರೂಪಕ್ಕಿಳಿಸಿ ಗ್ರಂಥ ರೂಪದಲ್ಲಿ ಅಷ್ಟಾಂಗ ಯೋಗ ವಿಜ್ಞಾನ ಮಂದಿರದವರು ಪ್ರಸ್ತುತಪಡಿಸಿರುತ್ತಾರೆ.
ಅನಾದಿ ಕಾಲದಿಂದ ಭಾರತ ದೇಶ ಆಸ್ತಿಕ ಜನರ ನೆಲೆವೀಡು. ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಧಾರ್ಮಿಕ ಮುಖಂಡರು ಜನ್ಮವೆತ್ತಿ ವಿವಿಧ ಧರ್ಮ/ಮತ ಸ್ಥಾಪನೆಯಾಗುವುದಕ್ಕೆ ಬಹು ಮೊದಲೇ ಭಾರತದಲ್ಲಿ ಪೂಜಾ ಪದ್ಧತಿಗಳು, ಅವುಗಳ ಮೂಲ ಉದ್ದೇಶ, ಈ ಸೃಷ್ಟಿಯ ರಹಸ್ಯ, ಮಾನವ ಜನ್ಮದ ಗೊತ್ತು ಗುರಿಗಳು, ಸೃಷ್ಟಿಯಲ್ಲಡಗಿರುವ ಸಾರ್ಥಕ ಲೌಕಿಕ ಜೀವನ ಕ್ರಮಗಳು, ಭಗವಂತ ಮತ್ತು ಆತನ ಆರಾಧನಾ ಕ್ರಮಗಳ ಬಗ್ಗೆ ಹಾಗೂ ಪುನರ್ಜನ್ಮದ ಬಗ್ಗೆ ಒಂದು ಸ್ಪಷ್ಟ ಕಲ್ಪನೆಯಿತ್ತು. ಈ ವಿಷಯಗಳಲ್ಲಿ ಭಾರತೀಯ ಮಹರ್ಷಿಗಳ ಕೊಡುಗೆ ಅಪಾರವಾದುದು. ಈ ಎಲ್ಲ ವಿಷಯದ ಬಗ್ಗೆಯೂ ಶ್ರೀ ಶ್ರೀ ರಂಗಪ್ರಿಯ ಶ್ರೀಪಾದ ಮಹಾದೇಶಿಕರು, ಮಹರ್ಷಿಹೃದಯವೇತ್ತರೂ ಯೋಗಿವರೇಣ್ಯರೂ ಆದ ಶ್ರೀರಂಗ ಮಹಾಗುರುಗಳ ಪದತಲದಲ್ಲಿ ಅಭ್ಯಸಿಸಿದ್ದಲ್ಲದೇ ತಮ್ಮ ಮೇಧೆಯಿಂದಲೂ ಹಾಗೂ ಶಾಸ್ತ್ರಾಧ್ಯಯನದಿಂದಲೂ ವೃದ್ಧಿಪದಿಸಿಕೊಂಡು ತಾವು ಪಡೆದ ನೋಟವನ್ನು ಆರ್ಷವಾದ ಪೂಜಾ ಪದ್ಧತಿಗೆ ಅನ್ವಯಿಸಿ ಆ ಕಲ್ಪಗಳ ವಿವಿಧ ಅಂಗಗಳ ಬಗ್ಗೆ ಸೂಕ್ತವಾದ ವಿವರಣೆಯನ್ನು ದಯಪಾಲಿಸಿದ್ದರು.
ಈಗ ಪ್ರಕಟವಾಗಿರುವ “ಪಂಚೋಪಚಾರ ಪೂಜೆ” ಪುಸ್ತಕದಲ್ಲಿ ಏಳು ಅಧ್ಯಾಯಗಳಿದ್ದು ಮೊದಲ ಎರಡು ಅಧ್ಯಾಯಗಳಲ್ಲಿ ಪೂಜೆಯ ಅರ್ಥ, ಉದ್ದೇಶ, ಪೂಜೆಗೆ ಅಧಿಕಾರಿಗಳು, ಅರ್ಚಕನ ಲಕ್ಷಣಗಳು, ಉತ್ತಮ ಪೂಜಾ ಕಲ್ಪ, ಪೂಜಾ ಪದಾರ್ಥಗಳು, ಅವುಗಳ ಲಕ್ಷಣ, ಬಹಿರಂಗ ಪೂಜೆ, ಅಂತರಂಗ ಪೂಜೆ ಇತ್ಯಾದಿಗಳ ಬಗೆಗೆ ವಿವರಿಸಲಾಗಿದೆ.
ಇಂದು ನಾವು ಅನುಸರಿಸುತ್ತಿರುವ ಅನೇಕ ಪೂಜಾ ವಿಧಾನಗಳಲ್ಲಿ ಪಂಚೋಪಚಾರ ಪೂಜೆಯೂ ಒಂದು ಪೂಜಾ ವಿಧಾನ. ಹೆಸರೇ ಸೂಚಿಸುವಂತೆ ಇಲ್ಲಿ ಐದು ಉಪಚಾರಗಳಿಗೆ ಪ್ರಾಮುಖ್ಯತೆ – ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ. ಕೇವಲ ಈ ಐದು ಉಪಚಾರಗಳು ಪೂಜಾ ಕಲ್ಪದ ಪ್ರಧಾನ ಆಚರಣೆಗಳಾದರೂ ಸಹ ಪೂಜಾ ಕಾರ್ಯ ನಡೆಸುವಾಗ ಭಕ್ತರು ಗಮನದಲ್ಲಿಟ್ಟುಕೊಳ್ಳಬೇಕಾದ ಹಾಗೂ ಅನುಸರಿಸಬೇಕಾದ ಇನ್ನೂ ಅನೇಕ ಸಂಗತಿಗಳಿವೆ. ಪೂಜೆ, ಅದರ ಮೂಲ ಉದ್ದೇಶ, ಪೂಜಾ ವಿಧಾನ, ಪೂಜಾ ದ್ರವ್ಯಗಳು ಇತ್ಯಾದಿ ವಿಷಯಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಂಡು ಪೂಜೆಯನ್ನು ನೆರವೇರಿಸುವುದೂ ಸಹ ತುಂಬಾ ಅಗತ್ಯ. ಪೂಜ್ಯ ಶ್ರೀ ರಂಗಪ್ರಿಯ ಶ್ರೀಪಾದ ಮಹಾದೇಶಿಕರು ಈ ಬಗ್ಗೆ ನೀಡಿದ ಪ್ರವಚನಗಳನ್ನು ಸಂಗ್ರಹಿಸಿ ಪೀಠಿಕಾ ರೂಪದಲ್ಲಿ ಮೊದಲ ಅಧ್ಯಾಯದಲ್ಲಿ ವಿವರಿಸಲಾಗಿದೆ.
ಪೂಜೆಗಳಲ್ಲಿ ಅಂತರಂಗ ಪೂಜೆ ಮತ್ತು ಬಾಹ್ಯ ಪೂಜೆ ಎಂದು ಎರಡು ವಿಭಾಗ ಮಾಡಬಹುದು. ಭಗವಂತನ ಸೃಷ್ಟಿಯಲ್ಲಿರುವ ಪದಾರ್ಥಗಳನ್ನು ಜೀವ ತನಗೋಸ್ಕರ ಎಂಬುದನ್ನು ಮರೆತು ಭಗವಂತನಿಗಾಗಿ ಎಂದು ಮಾನಸಿಕವಾಗಿ ಅರ್ಪಣೆ ಮಾಡುವುದು ಅಂತರಂಗ ಪೂಜೆ. ಬಾಹ್ಯ ಪೂಜೆ ಮತ್ತು ಅಂತರಂಗ ಪೂಜೆಗಳೆರಡನ್ನೂ ಸೇರಿಸಿಕೊಂಡು ಪೂಜೆ ಮಾಡುವ ಕ್ರಮ ಉತ್ತಮ ಕಲ್ಪ. ಹೀಗೆ ಬಾಹ್ಯ ಪೂಜೆಯನ್ನು ಅರ್ಥವತ್ತಾಗಿ ಮಾಡುವ ಅಂತರಂಗ ಅಥವಾ ಮಾನಸಿಕ ಪೂಜೆಯ ಬಗ್ಗೆ ಎರಡನೆಯ ಅಧ್ಯಾಯದಲ್ಲಿ ತಿಳಿಸಲಾಗಿದೆ.
ಮುಂದಿನ ಐದು ಅಧ್ಯಾಯಗಳಲ್ಲಿ ಪಂಚೋಪಚಾರ ಪೂಜೆಯ ಐದು ಉಪಚಾರಗಳ ಸಮಗ್ರ ವಿವರಣೆಯನ್ನು ಪ್ರತ್ಯೇಕವಾಗಿ ನೀಡಲಾಗಿದೆ. ಈ ಉಪಚಾರಗಳ ವೈಶಿಷ್ಟ್ಯ, ಅದಕ್ಕೆ ಬೇಕಾಗುವ ಪದಾರ್ಥಗಳು, ಆ ಪದಾರ್ಥಗಳ ಗುಣ ಧರ್ಮ, ಅವುಗಳನ್ನು ಸಮರ್ಪಿಸುವ ಕ್ರಮ, ಪೂಜೆ ಮಾಡುವವರಿಗೆ ಇರಬೇಕಾದ ಮನೋಧರ್ಮ, ಆದರಿಂದುಂಟಾಗುವ ಪರಿಣಾಮ, ಪ್ರಸಾದ ಸ್ವೀಕಾರ,ಪ್ರಸಾದ ಪ್ರಭಾವ ಇತ್ಯಾದಿಯಾಗಿ ಎಲ್ಲಾ ವಿಷಯಗಳ ಬಗ್ಗೆ ವಿವರವಾಗಿ ಉದಾಹರಣೆಗಳ ಸಹಿತ ವಿವರಿಸಲಾಗಿದೆ.
ಪ್ರತಿನಿತ್ಯ ಪೂಜಾ ಕೈಂಕರ್ಯಗಳನ್ನು ಶ್ರದ್ಧೆಯಿಂದ ನೆರವೇರಿಸುವ ಎಲ್ಲಾ ಆಸ್ತಿಕ ಭಕ್ತರು ಈ ಪುಸ್ತಕವನ್ನು ಓದಿ, ತಮ್ಮ ಮನಸ್ಸಿನಲ್ಲಿ ಮೂಡಿರುವ ಅನೇಕ ಸಂದೇಹಗಳಿಗೆ ಹಾಗೂ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದು ಪುಸ್ತಕದಲ್ಲಿರುವ ವಿಚಾರಗಳನ್ನು ತಮ್ಮ ಪೂಜೆಯಲ್ಲಿ ಅಳವಡಿಸಿಕೊಳ್ಳುವುದರಿಂದ ಹೆಚ್ಚು ಅರ್ಥವತ್ತಾಗಿ ಪೂಜಾ ಕಾರ್ಯವನ್ನು ನೆರವೇರಿಸಲು ತುಂಬಾ ಸಹಕಾರಿಯಗುತ್ತದೆ.