ಗ್ರಂಥ - ಜೀವನ ಮತ್ತು ಪುರುಷಾರ್ಥಗಳು (Jivana mattu purusharthagalu)
ಶ್ರೀರಂಗ ಮಹಾಗುರುವಿನಿಂದ ಜ್ಞಾನವನ್ನು ಪಡೆದ ಶಿಷ್ಯರುಗಳಲ್ಲಿ ಒಬ್ಬರಾಗಿ, ಗುರುವಿನಿಂದ ಪಡೆದ ಜ್ಞಾನದ ಅನುಭವಕ್ಕೆ ಅಕ್ಷರ ರೂಪವನ್ನು ನೀಡಿ ಜಗತ್ತಿಗೆ ಅರಿವನ್ನು ಹರಿಸುತ್ತಾ ಬಂದಿರುವ ಸಾತ್ತ್ವಿಕರಲ್ಲಿ ಒಬ್ಬರು ಶ್ರೀಯುತ ಶೇಷಾಚಲಶರ್ಮರು. ಇವರು ವೇದಾಧ್ಯಯನದ ಜೊತೆಗೆ ವ್ಯಾಕರಣ, ಅಲಂಕಾರ, ಪ್ರಾಚೀನನ್ಯಾಯ, ಸಾಂಖ್ಯ, ವೇದಾಂತ ಶಾಸ್ತ್ರಗಳಲ್ಲಿ ಆಳವಾದ ಅಧ್ಯಯನವನ್ನು ಪಡೆದ ವಿದ್ವಾಂಸರು. ತಮ್ಮ ಅಗಾಧ ಅನುಭವವವನ್ನು ಸಾಹಿತ್ಯ ಮಾಧ್ಯಮದ ಮೂಲಕ ಸುಲಲಿತವಾಗಿ ಜನಮಾನಸಕ್ಕೆ ತಲುಪಿಸುವ ಮಹತ್ಕಾರ್ಯವನ್ನು ಮಾಡುತ್ತಾ ಬಂದವರು. ಗುರು ಕೊಟ್ಟ ದೃಷ್ಟಿಕೋನದೊಂದಿಗೆ ತಾವು ನಡೆಸಿದ ಅಧ್ಯಯನವನ್ನು ಮೇಳೈಸಿ ಒಡಮೂಡಿಸಿದ ಕೃತಿರತ್ನವೇ “ಜೀವನ ಮತ್ತು ಪುರುಷಾರ್ಥಗಳು”.
ಪ್ರತಿಯೊಂದು ಜೀವಿಯ ಬದುಕಿನ ಅಯನವು ಸಾರ್ಥಕತೆಯನ್ನು ಪಡೆದುಕೊಳುತ್ತದೆ ಎಂಬ ವಿಷಯವನ್ನು ಈ ಹೊತ್ತಿಗೆಯಲ್ಲಿ ಪ್ರಧಾನವಾಗಿ ಅಚ್ಚೊತ್ತಿದ್ದಾರೆ. ಜೀವನಕ್ಕೆ ಆದರ್ಶರೂಪವಾದ ಒಂದು ಚೌಕಟ್ಟನ್ನು ಒದಗಿಸುಕೊಡುವುದು ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳು ಎಂಬ ವಿಷಯವನ್ನು ಸವಿವರವಾಗಿ ಶಾಸ್ತ್ರೀಯವಾಗಿ ನೀಡಿದ್ದಾರೆ.
ಜೀವತತ್ತ್ವದ ವಿಕಾಸ ಹೇಗೆ? ‘ಜಂತೂನಾಂ ನರಜನ್ಮ ದುರ್ಲಭಂ’ ಎಂಬ ಶಾಸ್ತ್ರ ವಾಕ್ಯದ ವಿಸ್ತಾರವಾದ ಅರ್ಥ ಹಾಗೂ ಆ ವಿಕಾಸದಲ್ಲಿ ಪ್ರಧಾನವಾಗಿ ಪುರುಷಾರ್ಥಗಳು ಹೇಗೆ ಪಾತ್ರವಹಿಸಿವೆ ಮತ್ತು ಅದರ ವಿಭಾಗದ ಸವಿವರಗಳು ಇಲ್ಲಿವೆ. ನಾಲ್ಕು ಪುರುಷಾರ್ಥಗಳಲ್ಲಿ ಮೊದಲನೆಯದಾದ ಧರ್ಮದಿಂದಲೇ ಉಳಿದ ಪುರುಷಾರ್ಥಗಳು ಸಿದ್ಧಿಸುತ್ತವೆ. ಇದನ್ನನುಸರಿಸಿಯೇ ಅರ್ಥ, ಕಾಮಗಳು ಅಡಿಯಿಟ್ಟರೆ ಮಾತ್ರ ಜೀವನದ ಒಳ-ಹೊರ ಸುಖವನ್ನು ಪಡೆಯಬಹುದು. ಧರ್ಮವೇ ಜೀವನದ ಬೇರಿದ್ದಂತೆ. ಆದ್ದರಿಂದ ಧರ್ಮವೇ ಅತ್ಯಂತ ಪ್ರಧಾನ ಅಗತ್ಯ ಹಾಗೂ ಅನಿವಾರ್ಯ. ಇದಕ್ಕೆ ಅನೇಕ ಮುಖಗಳಿವೆ, ಆತ್ಮಧರ್ಮ, ಬುದ್ಧಿಧರ್ಮ, ಮನೋಧರ್ಮ, ಇಂದ್ರಿಯಧರ್ಮ, ಶರೀರಧರ್ಮ, ವ್ಯಕ್ತಿಧರ್ಮ, ಸಮಾಜಧರ್ಮ, ರಾಷ್ಟ್ರಧರ್ಮ ಮೊದಲಾದವೇ ಧರ್ಮದಮುಖಗಳು. ಇವುಗಳುಕಾಲ-ದೇಶ-ಯುಗಾನುಸಾರವಾಗಿ ಆಚರಣೆಯಲ್ಲಿ ಹೇಗಿವೆ ಎಂಬುದನ್ನು ಈಪುಸ್ತಕದಲ್ಲಿ ಲೇಖಕರು ವಿವರಿಸಿದ್ದಾರೆ.
ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಇವು ನಾಲ್ಕು ಆಶ್ರಮಗಳು. ಇವುಗಳನ್ನು ಪುರುಷಾರ್ಥ ಸಾಧನೆಗೆ ಅನುಕೂಲಿಸಿವಂತೆ ಹೇಗೆ ರೂಢಿಸಿಕೊಳ್ಳಬೇಕು. ಅದರಿಂದ ಜೀವನವನ್ನು ಹೇಗೆ ಸಾರ್ಥಕಪಡಿಸಿಕೊಳ್ಳಬಹುದು ಎಂಬ ಮಾರ್ಮಿಕವೂ, ಆದರಣೀಯವೂ ಆದ ಚಿತ್ರಣ ಈ ಬರಹದಲ್ಲಿ ಕಂಡುಬರುತ್ತದೆ.
ಕೇವಲ ಅರ್ಥ ಕಾಮಗಳ ಹಾರಾಟವೇ ಮೆರೆಯುತ್ತಿರುವ ಕಾಲ ಈಗಿನ ಸಂಧಿಗ್ಧ ಕಾಲವಾಗಿದೆ. ಅದನ್ನೇ ಚೆನ್ನು ಎಂದು ಭ್ರಮಿಸಿ , ಒಪ್ಪಿ, ರಮಿಸಿ ಸಡೆಸುತ್ತಿರುವ ಈ ಕಾಲಕ್ಕೆ ಧರ್ಮದ ಬಗೆಗಿನ ಮಹತ್ತ್ವವನ್ನು ಅರುಹಿ ಅದರಿಂದ ಜೀವನದ ಪರಮ ಮತ್ತು ಚರಮ ಗುರಿಯಾದ, ಮುಕ್ತಿಯನ್ನು ಸಾಧಿಸಬಹುದು ಎಂದು ಸುಲಭ, ಸರಳಭಾಷೆಯಲ್ಲಿ ಗ್ರಂಥವನ್ನು ರಚಿಸಿದ್ದಾರೆ. ಪ್ರಸ್ತುತಕಾಲಕ್ಕೆ ಈ ಗ್ರಂಥ ವರವಾದಂತಿದೆ.