ಗ್ರಂಥ - "ಸಂಸ್ಕೃತಿ ಸೌರಭ"
ಕಾನನದ ಕುಸುಮವೊಂದು ಸದ್ದಿಲ್ಲದೇ ಅರಳಿ, ತನ್ನ ತನವನ್ನು ಹೂವಿನ ಸೌಂದರ್ಯದಲ್ಲಿ ಹೊರಹಾಕಿ, ಆಂತರ್ಯದ ಸೌರಭವನ್ನು ಬೀರಿ, ಮಾಧುರ್ಯ ಏರ್ಪಡಿಸಿ ಸಾರ್ಥಕಗೊಳ್ಳುತ್ತದೆ. ಅಂತೆಯೇಮಹಾ ಪುರುಷರು ಸದ್ದಿಲ್ಲದೇ ಬಂದು, ಜೀವನ ವೃಕ್ಷದಲ್ಲಿ ಸಂಸ್ಕೃತಿ ಎಂಬ ಹೂವನ್ನು ಅರಳಿಸಿ, ಅದರ ಸೌರಭವನ್ನು ಹೊರಸೂಸಿ, ಸಾರ್ಥಕ ಜೀವನದ ನಾಂದಿಯಾಗಿ ನಡೆನುಡಿಯಲ್ಲಿ ತೋರಿಹರಸುವುದು ಸಹಜ. ಈ ನಿಟ್ಟಿನಲ್ಲಿ 'ಸದ್ಗುರು' ಎಂಬ ಪದಕ್ಕೆ ಅನ್ವರ್ಥವಾಗಿ ಬಾಳಿ ಸನಾತನ ಭಾರತೀಯ ಸಂಸ್ಕೃತಿಗೆ ಮೂಲ ಸ್ರೋತಸ್ಸಾದ ಜ್ಞಾನ, ವಿಜ್ಞಾನ , ವಿದ್ಯೆ ಕಲೆ ಮುಂತಾದ ಆರ್ಷವಿಷಯಗಳನ್ನು ತನ್ನ ಆತ್ಮ ಮೂಲದಲ್ಲಿ ಸಾಕ್ಷಾತ್ಕರಿಸಿಕೊಂಡು , ಲೋಕಗುರುವಾಗಿ ಬೆಳಗಿದವರು ಮಹಾಯೋಗಿ ಶ್ರೀರಂಗಗುರುಗಳು. ಅವರು ಕೊಟ್ಟ ನೋಟದಿಂದ ಆ ಮಹಾಗುರುವುಸಾಂಧರ್ಭಿಕವಾಗಿ ಪ್ರಸ್ತಾಪಿಸಿದ ಗಹನ ವಿಷಯಗಳನ್ನು ಇದ್ದಂತೆಯೇ ಗ್ರಹಿಸಿ ಗ್ರಂಥ-ಕುಸುಮ ರೂಪಕ್ಕೆ ತಂದವರು ಶಿಷ್ಯ ಮಾಣಿಕ್ಯರಾದ ದಿ|| ಶ್ರೀಛಾಯಾಪತಿಗಳು. ಈ ಗ್ರಂಥ ಕುಸುಮದಸೌರಭವನ್ನು ಲೋಕಕ್ಕೆಲ್ಲಾ ಪಸರಿಸಲೆಂದೇ ಅಷ್ಟಾಂಗ ಯೋಗ ವಿಜ್ಞಾನ ಮಂದಿರವು "ಸಂಸ್ಕೃತಿ ಸೌರಭ" ಎಂಬ ಹೆಸರಿನಲ್ಲಿ ಪ್ರಕಾಶಪಡಿಸುತ್ತಿರುವುದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ.
"ಸಂಸ್ಕೃತಿ ಸೌರಭ"ಎಂಬ ಈ ಗ್ರಂಥ ರತ್ನವು ಸನಾತನ ಭಾರತದ ಸತ್ಯಸಂಸ್ಕೃತಿಯ ಸೌರಭವನ್ನು ಹರಡುವ ಅಮೂಲ್ಯ ಲೇಖನಗಳ ಕುಸುಮಮಾಲೆಯಾಗಿದೆ. ದಿನಬಳಕೆಯಲ್ಲಿ ಬರುವ ದೇವರು, ಸಂಸ್ಕೃತಿ, ಆಚಾರ ವಿಚಾರಗಳ ಕುರಿತಾದ ಅಪೂರ್ವ ದಿವ್ಯಾನುಭವದ ಸಾರವು ಲೇಖನಗಳಲ್ಲಿ ಪುಂಖಾನು ಪುಂಖವಾಗಿ ಹೊರ ಹೊಮ್ಮಿದೆ. ಗುರುಭಕ್ತ ಧುರೀಣರಾದ ಕರ್ತೃವು ಪ್ರಸ್ತುತ ಗ್ರಂಥದಲ್ಲಿಗುರುವಿನ ಆಶಯದ ಸೌರಭವನ್ನು ಏಳು ವಿಭಾಗಗಳಾಗಿ ಹೊಂದಿಸಿ ಸತ್ಯದ ದಿಗ್ದರ್ಶನ ಮಾಡುವಂತೆ ಸಂಯೋಜಿಸಿದ್ದಾರೆ. ಅದಕ್ಕೆ ಪೂರಕವಾಗಿ ಆಕರ್ಷಕ ಶೀರ್ಷಿಕೆ , ಮನಸೆಳೆವ ತಿಳಿಗನ್ನಡದಶೈಲಿ, ಯುಕ್ತಿ ಯುಕ್ತವಾದ ನಿರೂಪಣೆ ಸುಂದರವಾಗಿ ಮೇಳೈಸಿದ ಭಾವ ಭಾಷೆಗಳು ಬರಹಕ್ಕೆ ಮೆರಗು ತಂದಿವೆ.
ಮೊದಲನೇ ಸೌರಭ: ವಿಚಾರಪರರಿಗೆ ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳಿಗೆ ಸರಳ ಶೈಲಿಯ ಉದಾತ್ತ ವಿಚಾರಗಳನ್ನು ಇಲ್ಲಿ ತಿಳಿಸಲಾಗಿದೆ. ದೇವರು ಎಂಬುದು ಕೇವಲ ಕಲ್ಪನೆಯಲ್ಲ ಬದಲಿಗೆಜೀವನಕ್ಕೆ ಚೈತನ್ಯಧಾರೆಯನ್ನೆರೆಯುತ್ತಿರುವ ಪರಮೋಚ್ಚ ಸತ್ಯ ಎಂಬುದನ್ನು ಉದಾಹರಣೆಗಳ ಮೂಲಕ ಮನವರಿಕೆ ಮಾಡಿಕೊಡಲಾಗಿದೆ. ಪರಂಜ್ಯೋತಿಯಾದ ಒಂದೇ ವಸ್ತುವು ಬಹುವಾಗಿಬೆಳಗುವ ಬಗೆಯನ್ನು ಆಧುನಿಕ ವಿಜ್ಞಾನದ ಉದಾಹರಣೆಯೊಂದಿಗೆ ಮನೋಜ್ಞವಾಗಿ ಪ್ರತಿಪಾದಿಸಲಾಗಿದೆ. ಗೀತಾಚಾರ್ಯನೂ ಸಂಗೀತಾಚಾರ್ಯನೂ ಆದ ಭಗವಂತನ ಗಾಯನದ ಮೂಲಕಗಹನ ಸತ್ಯದ ಆತ್ಮ ವಿಜಯದ ಹಾದಿಯ ಗುರುತು ನೀಡಲಾಗಿದೆ .
ಎರಡನೇ ಸೌರಭ: ಬಾಳು ಬಂಗಾರವಾಗಿಸುವ, ಬಾಳಿನ ಬೆಲೆಯನ್ನು, ಜೀವನದ ಮಹಾ ಮೌಲ್ಯಗಳ ಸಾಂಧರ್ಭಿಕ ವಿವರಣೆಗಳೊಂದಿಗೆ ಸಹಜವಾಗಿ ನೈಜವಾಗಿ ಇಲ್ಲಿ ಚಿತ್ರಿಸಲಾಗಿದೆ. ಜೀವನದಅನೇಕ ರಂಗಗಳಲ್ಲಿ ಹರಡಿರುವ ಅಭಿಪ್ರಾಯಗಳನ್ನು ರಂಗ ಗುರುವಿನ ವಿಚಾರದ ನೇರದಲ್ಲಿ ರಂಗನ್ನು ತುಂಬಿ ಧರ್ಮಮೂಲ ಸಾಹಿತ್ಯಚಿತ್ರಣಕ್ಕೆ ಮೆರಗನ್ನು ಹರಿಸಲಾಗಿದೆ.
ಮೂರನೆಯ ಸೌರಭ: ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆ ಹೆಗ್ಗುರುತುಗಳ ಆಂತರ್ಯವನ್ನು ಇಲ್ಲೇ ಪ್ರಸ್ತಾಪಿಸಲಾಗಿದೆ. ಋಷಿ ಯುಗದ ಕಥೆ , ದೀಪದ ನಂದದ ಆನಂದದ ಸವಿ, ದೇವಾಲಯಗಳ ಹಿನ್ನೆಲೆ , ಮೂರ್ತಿಪೂಜೆಯ ವೈಶಿಷ್ಟ್ಯ, ಶಿವಲಿಂಗದ ಒಗಟು, ನಾಗ ಪೂಜೆಯ ಮರ್ಮ, ಮಾಂಗಲ್ಯದ ವಿಶೇಷತೆ, ಹುಟ್ಟು ಹಬ್ಬದ ವಿಶೇಷ ನೋಟ, ಗ್ರಹಣ ಆಚರಣೆಯ ವೈಜ್ಞಾನಿಕತೆ, ಇತ್ಯಾದಿ ವಿಚಾರಗಳನ್ನು ಅರ್ಥಗರ್ಭಿತವಾಗಿ ಎಣೆಯಲಾಗಿದೆ.
ನಾಲ್ಕನೆಯ ಸೌರಭ: ಕಲೆಯು ಹೇಗೆ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂಬುದರ ತಾತ್ವಿಕ ಸಹಜತೆಯನ್ನು ವರ್ಣಿಸಲಾಗಿದೆ. ರಂಗವಲ್ಲೀ ಕಲೆಯ ಮರ್ಮ, ನಾಟ್ಯಕಲೆಯ ಗಹನತತ್ವ- ನಟರಾಜನತಾಂಡವ ಲಾಸ್ಯದ ಮಹಾಯೋಗ ಭೂಮಿಕೆಗಳನ್ನು ಚೆನ್ನಾಗಿ ಬಿಂಬಿಸಲಾಗಿದೆ.
ಐದನೇ ಸೌರಭ: ರಾಷ್ಟ್ರ ನಿರ್ಮಾಣದಲ್ಲಿ ಧರ್ಮದ ಪ್ರಾಮುಖ್ಯತೆ , ರಾಷ್ಟ್ರಪ್ರೇಮದ ಸಾರ್ಥಕ ಜೀವನ, ಜ್ಞಾನ ಭೂಮಿ ಭಾರತದ ತ್ರಿವೇಣಿ ಸಂಗಮ , ದೇಶಸೇವೆಯ ಪ್ರಾಮುಖ್ಯತೆ, ಶ್ರೇಯಸ್ಸುಪ್ರೇಯಸ್ಸು ಒಳಗೊಂಡ ಸಂಸ್ಕೃತಜ್ಞನ ಕರ್ತವ್ಯ ಇತ್ಯಾದಿ ಸೂಕ್ಷ್ಮ ವಿಷಯಗಳನ್ನು ಜ್ಞಾನದರ್ಪಣದ ಮೂಲಕ ಪ್ರತಿಬಿಂಬಿಸಲಾಗಿದೆ.
ಆರನೆಯ ಸೌರಭ: ಇಲ್ಲಿ ಪದ ಹಾಗೂ ಪದಾರ್ಥಗಳ ಸೂಕ್ಷ್ಮ ಸಂಬಂಧಗಳನ್ನು ವಿವೇಚನಾಪೂರ್ವಕವಾಗಿ ಅರಿಯುವ ವಿಚಾರಗಳನ್ನು ಮಂಡಿಸಲಾಗಿದೆ. ಜ್ಞಾನಿಗಳು ಕಂಡ ಪುರುಷಾರ್ಥಮಯ ಸ್ವಾರಾಜ್ಯ -ಸುಖೀ ರಾಜ್ಯದ ಉಲ್ಲೇಖ, ಶ್ರೇಯಸ್ಸು ಪ್ರೇಯಸ್ಸುಗಳ ಅಂತರ ಅರಿತ ಸಾರ್ಥಕ ಜೀವನ, ಸನಾತನ ಎಂಬ ಅನುಭವ ಗೋಚರ ಸತ್ಯ, ಭಾರತೀಯ ಜ್ಞಾನಿಗಳ ದೃಷ್ಟಿಗೋಚರಸ್ವಾತಂತ್ರ್ಯದ ಹಿರಿಮೆ ಗರಿಮೆ, ಯೋಗ ಭೋಗ ಸಮ್ಮಿಳಿತವಾದ ಐಶ್ವರ್ಯ, ಆತ್ಮದರ್ಶಿ ಹಾಗೂ ಅಧ್ಯಾತ್ಮ ದೀಪಮಾಲೆಯಲ್ಲಿ ಜ್ಯೋತಿ ಪದದ ವಿಶ್ಲೇಷಣೆ, ಸತ್ಯ ಪದದ ಬಳಕೆಯ ಗುಟ್ಟು , ಸದ್ವಸ್ತುದರ್ಶನಕ್ಕೆ ಪೋಷಕವಾದ ಸತ್ಸಹವಾಸ, ಆತ್ಮಜ್ಯೋತಿಯಾದ ವೇದದ ಪರಿಜ್ಞಾನ, ನಿಜವಾದ ಅರ್ಥದಲ್ಲಿ ಆರ್ಯ, ಆನಂದದ ಸೆಲೆ ಪರಮ ಸುಖದ ನೆಲೆ ಹೀಗೆ ಬಹುಮುಖ ವಿಚಾರಗಳನ್ನುಒಳಗೊಂಡ ಈ ಸೌರಭ ನಿಜವಾಗಿಯೂ ಆಸ್ವಾದನೀಯವಾಗಿದೆ.
ಏಳನೆಯ ಸೌರಭ: ಏಳಿ ಎಚ್ಚರಗೊಳ್ಳಿ ಭಾರತರೇ ಅಗ್ನಿಯನ್ನು ಬಯಸಿರಿ ಎಂದು ಪ್ರಾರಂಭಗೊಂಡ ಈ ಸೌರಭವು, ಅಮೃತ ಪುತ್ರರು ನೀವು ಮಣ್ಣಿನ ಮಕ್ಕಳಲ್ಲಾ ಎಂದು ಒಳಗಣ್ಣನ್ನು ತೆರೆಸುವಂತಿದೆ. ಜ್ಞಾನಿಗಳು ಆತ್ಮವಲಯದಲ್ಲಿ ಏರಿದ ಗೌರೀಶಂಕರದ ಅವಿನಾಭಾವ ಸಂಬಂಧ, ಕೋಪವನ್ನು ಕಾರ್ಯಕಾರಿಯಾಗಿ ಬಳಸುವ ಜಾಣ್ಮೆ, ಮಾನವ ದೇಹವೊಂದು ಗುಪ್ತನಿಧಿಯ ಭಂಡಾರ ಎಂಬ ರಹಸ್ಯದಅರಿವು, ಭಕ್ತಿ ಮಾನವನ ಏಳಿಗೆಗೆ ಪೂರಕ; ಮಾರಕವಲ್ಲ ಎಂಬ ವಿಶ್ಲೇಷಣೆ, ಭೂಮಿಯನ್ನು ಹಿಡಿದಿರುವ ಶಕ್ತಿಗಳಾವುವು? ಎಂಬ ಅನ್ವೇಷಣೆ, ಹೀಗೆ ಆಂತರಿಕ ಸತ್ಯ ಪಥದೆಡೆಗೆ ನಮ್ಮ ಲಕ್ಷ್ಯಸೆಳೆವಲೇಖನಗಳು ಅಸಾಮಾನ್ಯವಾದವುಗಳು. ಈ ಬಗೆಯ ಶ್ರೇಯಸ್ಸಿನ ಅರಿವನ್ನು ತುಂಬುವ ಶ್ರೀರಂಗ ಮಹಾಗುರುವಿಗೆ ಈ ಬರಹ ಸೌರಭವು ಅರ್ಪಿತ ಎಂಬಲ್ಲಿಗೆ ಲೇಖಕರು ಮಂಗಳವನ್ನುಹಾಡಿದ್ದಾರೆ.
ಈ ಅಪೂರ್ವ ಲೇಖನ ಮಾಲೆಯು ವಿಚಾರಪರ ಬುದ್ಧಿಗೆ ಸ್ಫೂರ್ತಿಯನ್ನೂ ಅಭಿಮಾನಿಗಳಾದ ಸಹೃದಯರ ಎದೆಗೆ ಭಾವ ಸಮೃದ್ಧಿಯನ್ನೂ ನೀಡಲಿದೆಯಾಗಿ ಕನ್ನಡ ಜನತೆಗೆ ಎಲ್ಲಾ ರೀತಿಯಲ್ಲೂಸ್ವಾಗತಾರ್ಹವಾಗಿದೆ.