ಗ್ರಂಥ - "ಉಪನಯನಕ್ಕೊಂದು ಕೈಪಿಡಿ (Upanayanakkondu kaipidi)"
ಲೇಖಕರು: ಶ್ರೀ ಶ್ರೀ ರಂಗಪ್ರಿಯ ಸ್ವಾಮಿಗಳು
ಪ್ರಕಾಶಕರು: ಅಷ್ಟಾಂಗಯೋಗ ವಿಜ್ಞಾನ ಮಂದಿರಂ, ಬೆಂಗಳೂರು
ಮಹರ್ಷಿಸಂಸ್ಕೃತಿಯ ಅಂಗವಾಗಿ ಹೊರ ಹೊಮ್ಮಿದ ಸಂಸ್ಕಾರಗಳ ಸಂಖ್ಯೆ ಅನಂತವಾಗಿವೆ. ಜೀವಿಗಳನ್ನು ಭಗವಂತನೆಡೆ ಒಯ್ಯಲು ರೂಪಿಸಿದ ಈ ಸಂಸ್ಕಾರಗಳಲ್ಲಿ ಪ್ರಸಿದ್ಧವಾಗಿ ಇಂದೂ ಬಹುಮಟ್ಟಿಗೆ ಆಚರಿಸಲ್ಪಡುತ್ತಿರುವುದೆಂದರೆ ಉಪನಯನ ಮತ್ತು ವಿವಾಹ. ಆದರೂ ಇಂದು ಅವುಗಳ ಮೂಲರೂಪವು ಮರೆಯಾಗಿ ಯಾಂತ್ರಿಕ ಹಾಗೂ ಕೆಲವೆಡೆಗಳಲ್ಲಿ ಅರ್ಥಹೀನವಾದ ಆಚರಣೆಯೇ ಕಂಡುಬರುತ್ತಿದೆ. ಅವುಗಳಲ್ಲಿನ ಕ್ರಿಯಾ ಕಲಾಪಗಳ ಅರ್ಥವನ್ನೂ, ಮಹತ್ವವನ್ನೂ ತಿಳಿಸಿಕೊಡುವ ಕ್ರಮವು ಪರಂಪರೆಯಲ್ಲಿ ಮರೆಯಾಗಿರುವುದೇ ಇದಕ್ಕೆ ಕಾರಣ.
ಶ್ರೀರಂಗಮಹಾಗುರುಗಳು ಸಂಸ್ಕಾರಗಳಲ್ಲಿನ ಮಂತ್ರ-ತಂತ್ರ, ಕ್ರಿಯಾ ಕಲಾಪಗಳ ಹಿಂದಿರುವ ವಿಜ್ಞಾನವನ್ನು ಪರಿಪೂರ್ಣವಾಗಿ ಅರಿತವರಾಗಿದ್ದರು. ಸಂಸ್ಕಾರಗಳ ಉದ್ದೇಶ, ಪ್ರತಿಯೊಂದು ಸಂಸ್ಕಾರದಲ್ಲೂ ಕ್ರಿಯಾಕಲಾಪಗಳಲ್ಲಿ ದರ್ಭೆ, ಪಲಾಶ ಇತ್ಯಾದಿ ನಿರ್ದಿಷ್ಟವಾದ ಪದಾರ್ಥೆಗಳನ್ನೇ ಏಕೆ ಬಳಸಬೇಕು? ಅವುಗಳಿಂದಾಗುವ ಪ್ರಯೋಜನವೇನು? ಎಂಬ ವಿವರಗಳನ್ನು ಪೂಜ್ಯರಾದ ಶ್ರೀ ರಂಗಪ್ರಿಯಶ್ರೀಗಳು ಮಹಾಗುರುಗಳ ಪದತಲದಲ್ಲಿ ಕುಳಿತು ಪಾಠರೂಪವಾಗಿ ಅಧ್ಯಯನ ಮಾಡಿದವರು. ಸಂಸ್ಕಾರಗಳ ಪುನರುದ್ಧಾರಕ್ಕಾಗಿ ತಾವು ಕಲಿತ ವಿಚಾರಗಳನ್ನು ಅನೇಕ ಪ್ರವಚನಗಳ ಮೂಲಕ ಸಮಾಜಕ್ಕೆ ತಿಳಿಯಪಡಿಸಿದರು.
ಪೂಜ್ಯ ಸ್ವಾಮಿಗಳ ಉಪನಯನವನ್ನು ಕುರಿತಾದ ವಿಸ್ತಾರವಾದ ಪ್ರವಚನ ಮಾಲಿಕೆಯನ್ನು ಬರಹ ರೂಪಕ್ಕಿಳಿಸಿ ‘ಸಂಸ್ಕಾರ-ಏನು?ಏಕೆ? ಹೇಗೆ?’ ಎಂಬ ಗ್ರಂಥರೂಪದಲ್ಲಿ ಶ್ರೀಮಂದಿರವು ಪ್ರಕಾಶಗೊಳಿಸಿದೆ. ಇಂದಿನ ಜೀವನ ಶೈಲಿಯಲ್ಲಿ ವಿಸ್ತ್ರುತ ಗ್ರಂಥಗಳನ್ನು ಓದುವುದು ಬಹುಮಂದಿಗೆ ಅಸಾಧ್ಯವೆಂದೆನಿಸುವುದರಿಂದ ಅಂತಹವರ ಅನುಕೂಲಕ್ಕಾಗಿ ಅದರ ಕೆಲವು ಆಯ್ದ ಭಾಗಗಳನ್ನು ಈ ಕಿರು ಹೊತ್ತಿಗೆಯಲ್ಲಿ ಪ್ರಸ್ತುತಗೊಳಿಸಲಾಗಿದೆ. ಈ ಹೊತ್ತಗೆಯು ಸಂಕ್ಷಿಪ್ತವಾಗಿದ್ದರೂ ಎಲ್ಲ ಮುಖ್ಯಾಂಶಗಳನ್ನೂ ಒಳಗೊಂಡು, ಉಪನಯನದ ವಿಚಾರಗಳನ್ನು ತಿಳಿಯುವುದರಲ್ಲಿ ಓದುಗರ ಉತ್ಸುಕತೆಯನ್ನು ವೃದ್ಧಿಗೊಳಿಸುವುದಾಗಿದೆ.
ಈ ಹೊತ್ತಗೆಯಲ್ಲಿ ಮೊಟ್ಟಮೊದಲಿಗೆ ಸಂಸ್ಕಾರವೆಂದರೇನು ಎಂಬುದನ್ನು ತಿಳಿಸಿ, ಮನುಷ್ಯಮಾತ್ರರಿಗೆ ಸಂಸ್ಕಾರಗಳ ಅವಶ್ಯಕತೆ ಏನು ಎಂಬುದನ್ನು ತಿಳಿಯಪಡಿಸಿದ್ದಾರೆ. ನಂತರ ಉಪನಯನದ ವಿವಿಧ ನಾಮಗಳು, ಉಪನಯನದ ವೈಶಿಷ್ಟ್ಯಗಳನ್ನು ಹೇಳಿ ಅಷ್ಟು ವಿಶಿಷ್ಟವಾದ ಕರ್ಮಕ್ಕೆ ಇಂದು ಒದಗಿರುವ ಶೋಚನೀಯ ಸ್ಥಿತಿಯನ್ನು ಎತ್ತಿ ತೋರಿಸಿದ್ದಾರೆ. ಅನೇಕ ಕಡೆಗಳಲ್ಲಿ ಉಪನಯನವು ವಿವಾಹಕ್ಕೆ permission ಎಂಬುದಾಗಿ ಮಾತ್ರವೇ ಪರಿಗಣಿಸಲ್ಪಡುತ್ತಿದೆ ಎಂಬ ಅಂಶವನ್ನೂ ಸೂಚಿಸಿದ್ದಾರೆ.
ಉಪನಯನ ಮಾಡುವವರು ಹಾಗೂ ಮಾಡಿಸಿಕೊಳ್ಳುವವರು ಇಬ್ಬರಿಗೂ ಇರಬೇಕಾದ ಯೋಗ್ಯತೆಯನ್ನು ವಿವರಿಸಿ, ಈ ಕರ್ಮಕ್ಕೆ ಸೂಕ್ತ ಕಾಲವನ್ನೂ ಸೂಚಿಸಿದ್ದಾರೆ. ಉಪನಯನದಲ್ಲಿ ಬಳಸಲ್ಪಡುವ ಪದಾರ್ಥಗಳು, ಅವುಗಳ ಆಯ್ಕೆಯ ಹಿಂದಿರುವ ಉದ್ದೇಶಗಳು ಸ್ಪಷ್ಟವಾಗಿ ವಿವರಿಸಲ್ಪಟ್ಟಿವೆ. ನಂತರ ಅಲ್ಲಿ ನಡೆಯುವ ಕ್ರಿಯಾ ಕಲಾಪಗಳ ಅರ್ಥ ಹಾಗೂ ಉಪನೀತನಾದವನ ಕರ್ತವ್ಯಗಳು ತಿಳಿಯಪಡಿಸಲಾಗಿದೆ.
ಕೊನೆಯದಾಗಿ, ಉಪನಯನ ಸಂಸ್ಕಾರದ ವಿಜ್ಞಾನವನ್ನು ತಿಳಿಸಿದ ಮಾತ್ರಕ್ಕೆ ಶ್ರದ್ಧಾಳುಗಳೂ ಕೂಡ ಕರ್ಮಾಚರಣೆಯಲ್ಲಿ ಸುಧಾರಣೆಯನ್ನು ತಂದುಕೊಳ್ಳುವುದು ಸುಲಭಸಾಧ್ಯವಲ್ಲ ಎನ್ನುವುದನ್ನು ಮನಗಂಡ ಸ್ವಾಮಿಗಳು ಇದನ್ನು ಸಾಧಿಸಲು ಸೂಕ್ತ ಮಾರ್ಗದರ್ಶನವನ್ನು ನೀಡಿದ್ದಾರೆ. ಆಚರಿಸುವ ಮನಸ್ಸುಳ್ಳವರಿಗೂ ಇಂದು ಏಳಬಹುದಾದ ಕೆಲವು ಸಮಸ್ಯೆಗಳಿಗೆ ಕಾಲಾನುಗುಣವಾದ ಸೂಕ್ತ ಪರಿಹಾರಗಳನ್ನು ಸೂಚಿಸಿದ್ದಾರೆ.
ಒಟ್ಟಾರೆ ಉಪನಯನದಲ್ಲಿನ ಕರ್ಮಗಳ ಮರ್ಮವನ್ನು ಅರಿತು ಯಥಾವತ್ತಾಗಿ ಆಚರಿಸಲು ಬೇಕಾದ ಅಷ್ಟೂ ಅಂಶಗಳನ್ನೂ ಒಳಗೊಂಡ ಅದ್ಭುತ ಹೊತ್ತಿಗೆಯಾಗಿದೆ ಇದು. ಓದುಗರ ಬುದ್ಧಿ ಮತ್ತು ಆತ್ಮಗಳಿಗೆ ಒಳ್ಳೆಯ ಸಂಸ್ಕಾರವನ್ನು ಕೊಟ್ಟು ಶಾಸ್ತ್ರವಿಧಿತವಾದ ಕಾಲ, ವಿಧಾನಗಳಲ್ಲಿ ಉಪನಯನವನ್ನು ಆಚರಿಸುವ ಶ್ರದ್ಧೆಯನ್ನು ಉಂಟುಮಾಡುವ ಅಮೂಲ್ಯ ಕಿರು ಹೊತ್ತಿಗೆಯಾಗಿದೆ.