ಗ್ರಂಥ - ವಿಶ್ವರೂಪದರ್ಶನ (Vishwaroopdarshana)
ಪೂಜ್ಯ ಶ್ರೀಶ್ರೀ ರಂಗಪ್ರಿಯ ಸ್ವಾಮೀಜೀಯವರು, ತಮ್ಮ ಅಸಾಧಾರಣ ಶಾಸ್ತ್ರ- ಪ್ರಯೋಗ - ಆಚರಣಾ ಪಾಂಡಿತ್ಯ, ಸಾಧನೆ ಮತ್ತು ತಮ್ಮ ಗುರುಗಳಾದ ಶ್ರೀರಂಗ ಮಹಾಗುರುಗಳ ಅನುಗ್ರಹ ದಿಂದ ಪಡೆದ ಒಳನೋಟ ಇವುಗಳ ಅಡಿಪಾಯದಮೇಲೆ, ತಮ್ಮ ಪೂರ್ವಾಶ್ರಮದಲ್ಲಿ, ಅಷ್ಟಾಂಗಯೋಗ ವಿಜ್ಞಾನ ಮಂದಿರದಲ್ಲಿ ಶ್ರೀಮದ್ ಭಗವದ್ ಗೀತೆಯ ೧೧ ನೆಯ ಅಧ್ಯಾಯದಮೇಲೆ ಅನುಗ್ರಹಿಸಿದ ಪ್ರವಚನಮಾಲಿಕೆಯನ್ನಾಧರಿಸಿ ಹೊರತಂದಿರುವ ಮುನ್ನೂರು ಪುಟಗಳ ವಿಸ್ತಾರ ಗ್ರಂಥ "ವಿಶ್ವರೂಪದರ್ಶನ".
ಅವರದೇ ಮಾತಿನಲ್ಲಿ, ಉಪನಿಷದ್ ಪ್ರತಿಪಾದ್ಯನಾದ, ವೇದಮೂಲನಾದ, ಧರ್ಮಮೂರ್ತಿಯಾದ ಶ್ರೀಕೃಷ್ಣಪರಮಾತ್ಮನ ಮುಖಾರವಿಂದದಿಂದಲೇ ಎಲ್ಲ ಉಪನಿಷದ್ ಸಾರವಾಗಿ ಅವತಿರಿಸಿದ್ದು ಗೀತಾಶಾಸ್ತ್ರ. ಅದರ ಎರಡನೆಯ ಅಧ್ಯಾಯದಿಂದ ಆರನೆಯದರವರೆವಿಗೂ ಮಾಡಿದ ಉಪದೇಶದಿಂದ ಅರ್ಜುನನಿಗಿದ್ದ 'ದೇಹವೇ ಆತ್ಮ' ಎಂಬ ನಂಬಿಕೆ ಹೋಗಲಾಡಿಸಿ, ಏಳರಿಂದ ಹತ್ತನೆಯ ಅಧ್ಯಾಯಗಳಲ್ಲಿ ವಿಶ್ವದ ಸೃಷ್ಟಿ, ಸ್ಥಿತಿ, ಲಯ ಇವುಗಳ ಬಗ್ಗೆ ತಿಳಿಹಿಸುತ್ತಾನೆ. ಕಾಲಾತೀತನಾದ ಪರಮಾತ್ಮನು, ತನ್ನ, ಇದುವರೆವಿಗೂ ಯಾರೂ ಕಾಣದ, ಅರಿಯದ, ದಿವ್ಯ- ಭವ್ಯ- ಭೀಕರ ಪರಿಪೂರ್ಣ ಕಾಲರೂಪವನ್ನು, ದರ್ಶಿಸಲು ಬೇಕಾದ ದೃಷ್ಟಿಕೋಣ, ದಿವ್ಯದೃಷ್ಟಿಗಳನ್ನನುಗ್ರಹಿಸಿ, ವಿಶ್ವದಲ್ಲೇನೇನಿದೆಯೋ ಅದೆಲ್ಲವೂತನ್ನಲ್ಲಡಗಿದೆ, ಎಲ್ಲಕ್ಕೂತಾನು ಆತ್ಮಭೂತ ಎಂದು "ತೋರಿಸುವ" ಅಧ್ಯಾಯ ೧೧ನೆಯದು. ಹಿಂದಿನ ೧೦ ಥಿಯರಿಯಾದರೆ, ಈ ಅಧ್ಯಾಯ ಪ್ರ್ಯಾಕ್ಟಿಕಲ್.
ಜ್ಞಾನಿಗಳು ಬಹಳವಾಗಿ ಕೊಂಡಾಡಿರುವ ಈ ಅಧ್ಯಾಯವು,೫೫ ಸ್ಲೋಕಗಳನ್ನೊಳಗೊಂಡಿದೆ.ಈ ಶ್ಲೋಕಗಳನ್ನು ವಿಷಯದ ದೃಷ್ಟಿಯಿಂದ ೯ ವಿಭಾಗಗಳನ್ನಾಗಿ "ವಿಶ್ವರೂಪದರ್ಶನ" ದಲ್ಲಿ ವಿಂಗಡಿಸಿದೆ. ಭಗವದ್ಗೀತೆಯ ಹಿನ್ನೆಲೆ, ವಿಶ್ವರೂಪವನ್ನು ತೋರಿಸಲು ಪ್ರಾರ್ಥನೆ, ಭಗವಂತನ ಅನುಗ್ರಹ, ದಿವ್ಯದೃಷ್ಟಿಪ್ರದಾನ, ಸಂಜಯನು ಕಂಡ ವಿಶ್ವರೂಪ, ಅರ್ಜುನನಿಂದ ವಿಶ್ವರೂಪದ ಹಾಗೂ ಭೀಕರ ದೃಶ್ಯಗಳ ವರ್ಣನೆ, ಅರ್ಜುನನ ಭೀತಿ, ಪ್ರಾರ್ಥನೆ ಮತ್ತು ಸ್ತೋತ್ರ, ನೀನುಯಾರೆಂಬ ಪ್ರಶ್ನೆ, ಭಗವಂತನ ಅಭಯಪ್ರದಾನ, ಭಗವಂತನ ಭಕ್ತಿಯೋಗದ ಪ್ರಶಂಸೆ ಮೊದಲಾದ ವಿಭಾಗಗಳು. ಇವುಗಳ ಬಗ್ಗೆ ಶ್ರೀಶಂಕರರು, ಭಗವದ್ ರಾಮಾನುಜರು, ಶ್ರೀಮಧ್ವಾಚಾರ್ಯರು, ಯಾಮುನಮುನಿಗಳು ಮತ್ತಿತರು ಮಾಡಿದ ಭಾಷ್ಯ- ವ್ಯಾಖ್ಯಾನಗಳನ್ನೂ, ಉಪನಿಷದ್- ವೇದಗಳ ಅಂತರಾರ್ಥಗಳನ್ನೂ, ಎಲ್ಲವಿಷಯ-ದೃಷ್ಟಿಕೋಣಗಳನ್ನೂ, ಗುರು ಕೊಟ್ಟ ಒಳನೋಟದಿಂದ ವಿಶದಪಡಿಸಿ, ಸಮನ್ವಯಗೊಳಿಸಿದ್ದಾರೆ ಪೂಜ್ಯ ಸ್ವಾಮೀಜೀಯವರು.
ಈ ಗ್ರಂಥದಲ್ಲಿನ ಪ್ರತಿಯೊಂದು ಪದ ಹಾಗೂ ವಾಕ್ಯಗಳೂ ಆಸ್ವಾದನಿಯವೇ. ಉ.ದಾ. "ಈ ಶರೀರ ರಥದಲ್ಲಿ ಧರ್ಮಾಧರ್ಮಗಳ ಹೋರಾಟದ ನಡುವಿನಲ್ಲಿ, ತನ್ನ ರಥವನ್ನು ಸುಷುಮ್ನೆಯ ನಿಶ್ಚಲ ಸ್ಥಾನದಲ್ಲಿ ನಿಲ್ಲಿಸಿ, ದೇಹರಥದ ಇಂದ್ರಿಯಕುದುರೆಗಳನ್ನು ಒಳಗೆ ಸೆಳೆದುಕ್ಕೊಂಡು ಸ್ತಬ್ಧಗೊಳಿಸಿ, ಜೀವ ಮತ್ತು ದೇವರ, ನರ ಮತ್ತು ನಾರಾಯಣರ ಸಂವಾದ ನಮ್ಮಗಳ ಆತ್ಮೋದ್ಧಾರಕ್ಕಾಗಿ ಅನುಗ್ರಹಿಸಿದ್ದಾನೆ...";".. ಸೋಮ ಸೂರ್ಯಾಗ್ನಿಮಂಡಲಗಳ ಸ್ವರೂಪನಾಗಿ, ಅವುಗಳನ್ನೂ ದಾಟಿರುವ ಬಿಂದು-ನಾದ-ಕಲಾತೀತನಾದ ಪರಬ್ರಹ್ಮನಾನಾಗಿದ್ದೇನೆ .."; " ... ಪ್ರಕೃತಿಯಸೋಮ ಸೂರ್ಯಾಗ್ನಿಮಂಡಲಗಳನ್ನು ಪ್ರತಿಬಿಂಬಿಸುವ ನವಿಲುಗರಿ ಅವನಿಗೆ ಆಭರಣ..."; " .. ಕೈಗಳಲ್ಲಿ ಜ್ಞಾನಮುದ್ರೆ, ಮತ್ತು ದಂಡವಾಗುವ ವೇಣು. ದಂಡ ಏಕೆಂದರೆ, ಇಂದ್ರಿಯ ರೂಪವಾದ ಕುದುರೆಗಳು ಹತೋತಟಿಯಲ್ಲಿರಲೆಂದು...."; "...ಬಗೆಬಗೆಯ ಯೋನಿಗಳಿಂದ ಕೂಡಿರುವ ಜೀವಿಗಳನ್ನೆಲ್ಲಾ ನನ್ನ ವನಮಾಲೆಯಲ್ಲಿ ಒಟ್ಟಾಗಿ ಸೇರಿಸುವ ಸತ್ಯಸೂತ್ರ ನಾನಾಗಿದ್ದೇನೆ ...".
ಇಂತಹ ಅನೇಕಾನೇಕ ತಾತ್ವಿಕ , ಆಧ್ಯಾತ್ಮಿಕ, ಯೋಗಿಕ ಅನುಭವ ವಿಷಯಗಳನ್ನೊಳಗೊಂಡ "ವಿಶ್ವರೂಪದರ್ಶನ" ಪ್ರತಿಯೊಬ್ಬರ ಮನೆಯನ್ನೂ ಅಲಂಕರಿಸಬೇಕಾದ ಗ್ರಂಥ.