ಗ್ರಂಥ - "ವಿವಾಹಕ್ಕೊಂದು ಕೈಪಿಡಿ (Vivahakkondu kaipidi)"
ಲೇಖಕರು: ಶ್ರೀ ಶ್ರೀ ರಂಗಪ್ರಿಯ ಸ್ವಾಮಿಗಳು
ಪ್ರಕಾಶಕರು: ಅಷ್ಟಾಂಗಯೋಗ ವಿಜ್ಞಾನ ಮಂದಿರಂ, ಬೆಂಗಳೂರು
ಬಾಳಬೆಳಕನ್ನು ತಮ್ಮ ಅಪಾರವಾದ ತಪಸ್ಯೆಯಿಂದ ಕಂಡು ಪರಮಾನಂದಭರಿತರಾದ ಭಾರತೀಯ ಮಹರ್ಷಿಗಳು ಪರಮ ಕರುಣಾಳುಗಳು. ತಾವು ಅನುಭವಿಸಿದ ಪರಮಸುಖವನ್ನು ಲೋಕವೆಲ್ಲವೂ ಅನುಭವಿಸಲಿ ಎಂಬ ಆಶಯದಿಂದ ಕೂಡಿದವರಾಗಿದ್ದರು. ಆದರೆ ಅದಕ್ಕಾಗಿ ಜೀವನದಲ್ಲಿ ಇಂದ್ರಿಯಗಳ ಸುಖವನ್ನು ಹಳಿದು ಪರಮವೈರಾಗ್ಯದ ದಾರಿಯನ್ನು ಮಾತ್ರ ಬೋಧಿಸಿದವರಲ್ಲ. ಇಂದ್ರಿಯಗಳೂ ಭಗವಂತನ ಪ್ರಸಾದವಾಗಿಯೇ ಸೃಷ್ಟಿಯಲ್ಲಿ ಬಂದಿರುವುದರಿಂದ ಅವುಗಳನ್ನೂ ಗೌರವಿಸಬೇಕೆಂಬುದೇ ಅವರ ಆದೇಶ. ಆದರೆ ಅವುಗಳನ್ನು ಸೃಷ್ಟೀಶನ ಆಶಯಕ್ಕೆ ಅನುಗುಣವಾಗಿ ಅನುಭವಿಸಿ ತನ್ಮೂಲಕವೇ ಪರಮಾನಂದ ನಿಧಿಯನ್ನು ಹೊಂದಬೇಕೆಂಬುದು ಅವರ ಮತ. ಋಷಿ, ಮಹರ್ಷಿ, ಬ್ರಹ್ಮಋಷಿಗಳಲ್ಲಿ ಬಹುಮಂದಿ ವಿವಾಹಿತರಾಗಿ ಸಾಂಗೋಪಾಂಗವಾಗಿ ಗೃಹಸ್ಥಜೀವನವನ್ನು ನಡೆಸಿ ಜ್ಞಾನ ಸಂತಾನಗಳನ್ನು ಬೆಳೆಸಿದ ಚರಿತ್ರೆಗಳನ್ನು ನಮ್ಮ ದೇಶದ ಇತಿಹಾಸ ಪುರಾಣಗಳು ಸಾರುತ್ತವೆ.
ಐಹಿಕ-ಪಾರಮಾರ್ಥಿಕ ಸುಖಗಳೆರಡನ್ನೂ ಅನುಭವಿಸಲು ಅನುಗುಣವಾಗಿ ಮನಸ್ಸನ್ನು ಸುಸಂಸ್ಕೃತಗೊಳಿಸಲು, ಅಂದರೆ ಧ್ಯೇಯಸಾಧನೆಗನುಗುಣವಾದ ಸ್ಥಿತಿಗೆ ತರುವಂತೆ ಮಾಡಲು ವಿಧಿಸಿದ ಕರ್ಮಗಳನ್ನು ‘ಸಂಸ್ಕಾರಗಳು’ ಎಂಬುದಾಗಿ ಕರೆದರು. ಪ್ರಧಾನವಾದ 16 ಸಂಸ್ಕಾರಗಳಲ್ಲಿ ಪ್ರಮುಖವಾದದ್ದು ವಿವಾಹ ಸಂಸ್ಕಾರ. ವಿವಾಹವೆಂಬುದು ಪ್ರಪಂಚದ ಎಲ್ಲ ಜನಾಂಗಗಳಲ್ಲೂ ನದೇಯುತ್ತಲೇ ಇದೆ. ಆದರೆ ಭಾರತೀಯ ವಿವಾಹಪದ್ಧತಿಯು ಉತ್ಕೃಷ್ಟವಾದ ಧ್ಯೇಯದಿಂದ ಕೂಡಿ ಇತರ ಪದ್ಧತಿಗಳಿಗಿಂತ ವಿಭಿನ್ನವಾಗಿದೆ.
ಮಹರ್ಷಿಹೃದಯವೇದ್ಯರಾಗಿ ಮಹಾಯೋಗೇಶ್ವರರೂ ಆದ ಶ್ರೀರಂಗಮಹಾಗುರುಗಳು ವಿವಾಹಾದಿ ಸಂಸ್ಕಾರಗಳಲ್ಲಿ ಅಡಗಿರುವ ವಿಜ್ಞಾನವನ್ನು ಆಮೂಲಾಗ್ರವಾಗಿ ಅರಿತ ಮಹಾ ಮೇಧಾವಿಯಾದವರು. ಇವರ ಪದತಲದಲ್ಲಿ ಕುಳಿತು ಆ ವಿಚಾರಗಳೆಲ್ಲವನ್ನೂ ಕಲಿತು ತಮ್ಮ ಪಾಂಡಿತ್ಯ, ವೈದುಷ್ಯಗಳಿಗೆ ಹೊಸ ಮೆರುಗನ್ನು ಸೇರಿಸಿಕೊಂಡವರು ಶ್ರೀ ಶ್ರೀ ರಂಗಪ್ರಿಯಶ್ರೀಗಳು. ಗುರುಭಕ್ತ ಶಿರೋಮಣಿಗಳಾದ ಇವರು ಗುರುವಿನ ಆಶಯದಂತೆ ಶಿಥಿಲವಾಗಿರುವ ಸಂಸ್ಕಾರಗಳನ್ನು ಪುನರುದ್ಧಾರ ಮಾಡುವ ಕಾರ್ಯದಲ್ಲಿ ತಮ್ಮನ್ನು ಅನವರತವೂ ತೊಡಗಿಸಿಕೊಂಡಿದ್ದವರು.ಅದರ ಫಲಶ್ರುತಿಯೇ ಈ ಕಿರುಗ್ರಂಥ.
ಇಂದು ನಮ್ಮ ದೇಶದಲ್ಲಿ ಬಹು ಪಾಲು ಮಂತ್ರ-ತಂತ್ರ ಪುರಸ್ಸರವಾಗಿಯೇ ವಿವಾಹಗಳು ನಡೆಯುತ್ತಿದ್ದರೂ ಆ ಆಚರಣೆಗಳೆಲ್ಲವೂ ಯಾಂತ್ರಿಕವಾಗಿಯೇ ನಡೆಯುತ್ತಿರುವುದು ಸುಸ್ಪಷ್ಠವಾಗಿದೆ. ಅವುಗಳಲ್ಲಡಗಿರುವ ಋಷಿಗಳ ಆಶಯವೂ, ಅವುಗಳ ಮೂಲ ರೂಪವೂ ಮರೆಯಾಗಿವೆ. ತಿಳಿವಳಿಕೆಯಿಲ್ಲದ ಆಚರಣೆಯಿಂದ ಋಷಿಪ್ರಣೀತವಾದ ಕರ್ಮಗಳೆಲ್ಲವೂ ಇಂದಿನ ವೈಚಾರಿಕ ಪ್ರಪಂಚದಲ್ಲಿ ಅರ್ಥಹೀನವಾಗಿ ಕಂಡು ಬರುವುದೂ ಸಹಜವೇ ಆಗಿದೆ. ಆದ್ದರಿಂದಲೇ ಅವು ಅನೇಕರ ಕುಚೋದ್ಯಕ್ಕೂ, ಕುವ್ಯಾಖ್ಯಾನಕ್ಕೂ ವಿಷಯವಾಗಿವೆ. ಈ ದುಸ್ಥಿತಿಯ ಪರಿಹಾರಕ್ಕಾಗಿ ಶ್ರೀಗಳು ತಮ್ಮ ಪೂರ್ವಾಶ್ರಮದಲ್ಲಿ ಅನೇಕ ವಿವಾಹಸಂದರ್ಭಗಳಿಗೆ ದಯಮಾಡಿಸಿ ಅಲ್ಲಿ ನೆರೆದ ಜನರಿಗೆ ಜ್ಞಾನಿಗಳ ವಿವಾಹ ಪದ್ಧತಿಯನ್ನು ಕುರಿತಾಗಿ ಪ್ರವಚನಗಳನ್ನು ನೀಡುತ್ತಿದ್ದರು. ಅಂತಹದೊಂದು ಸುಸಂದರ್ಭದಲ್ಲಿ ನಡೆದ ಪ್ರವಚನದ ಬರಹ ರೂಪವೇ ‘ವಿವಾಹಕ್ಕೊಂದು ಕೈಪಿಡಿ’ ಎಂಬ ಕಿರುಹೊತ್ತಿಗೆ. ಇದು ವಿವಾಹದ ಎಲ್ಲ ಕಲಾಪಗಳ ಮುಖ್ಯಾಂಶಗಳನ್ನೂ ಸಂಕ್ಷೇಪವಾಗಿ ಒಳಗೊಡಿದೆ.
ಇಲ್ಲಿ ಮೊದಲು ಸಂಸ್ಕಾರ ಎಂದರೇನು ಎಂಬುದನ್ನು ತಿಳಿಸಿ ನಂತರ ಎಂಟು ರೀತಿಯ ವಿವಾಹ ಪದ್ಧತಿಗಳ ಪರಿಚಯವನ್ನು ಸಂಕ್ಷೇಪವಾಗಿ ಮಾಡಿದ್ದಾರೆ. ವಿವಾಹ ಶಬ್ದದ ಅರ್ಥವನ್ನು ತಿಳಿಸಿ ಈ ನೇರದಲ್ಲಿ ವಿವಾಹಕ್ಕೆ ಇಂದು ಬಳಸುವ ಆಂಗ್ಲ ಭಾಷಾಂತರವು ಹೇಗೆ ಮೂಲ ಪದದ ಅರ್ಥವನ್ನು ಸೂಚಿಸಲು ಅಸಮರ್ಥವಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ‘ವಿವಾಹ’ಪದದ ಹಿನ್ನೆಲೆಯನ್ನು ಗಮನಿಸಿದಾಗ ಇಂದು ಪ್ರಚಲಿತವಾಗಿರುವ ಅನೇಕ ಆಹ್ವಾನಪತ್ರಿಕೆಗಳು ಹೇಗೆ ಅರ್ಥಹೀನ ಹಾಗೂ ಹಾಸ್ಯಾಸ್ಪದ ಎಂಬುದನ್ನೂ ತೋರಿಸಿಕೊಟ್ಟಿದ್ದಾರೆ.
ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಪ್ರಚಲಿತವಾಗಿರುವ ಪದ್ಧತಿಯು ‘ಬ್ರಾಹ್ಮ ವಿವಾಹ’ವೆಂಬ ರೀತಿಯದು ಎಂಬುದನ್ನು ಹೇಳಿ ಅದರ ವೈಶಿಷ್ಟ್ಯವನ್ನೂ ಎತ್ತಿ ತೋರಿಸಿದ್ದಾರೆ. ಈ ಪದ್ದತಿಯ ಅಂಗವಾದ ಅಗ್ನಿಪ್ರದಕ್ಷಿಣೆಗೆ ಮಾಡುವ ಸಂಕಲ್ಪ, ಅದಕ್ಕೆ ಕೊಟ್ಟಿರುವ ಅರ್ಥವತ್ತಾದ ಇತರ ಹೆಸರು ಇವುಗಳ ವಿವರವು ಇಲ್ಲಿ ಕಂಡುಬರುತ್ತಿದೆ. ಅಂತೆಯೇ ‘ಪಾಣಿಗ್ರಹಣ’-ಕೈ ಹಿಡಿಯುವುದು. ಪತಿಯಾದವನು ಪತ್ನಿಯ ಕೈಯನ್ನು ಹಿಡಿಯುವಾಗ ಅದಕ್ಕೆ ಸೂಚಿಸಿರುವ ನಿರ್ದಿಷ್ಟಕ್ರಮವು ಹೇಗೆ ವಿವಾಹದ ಉನ್ನತ ಧ್ಯೇಯಕ್ಕೆ ಅನುಗುಣವಾಗಿದೆ ಎಂಬುದನ್ನು ಮನವರಿಕೆಮಾಡಿದ್ದಾರೆ. ಆ ಸಮಯದಲ್ಲಿ ಹೇಳುವ ಮಂತ್ರಗಳು ಎಷ್ಟು ಉತ್ಕೃಷ್ಟವಾದ ಭಾವವನ್ನೂ, ಹೃದಯೈಕ್ಯವನ್ನೂ ಸೂಚಿಸುತ್ತಿವೆ. ಮುಂದಿನ ಗೃಹಸ್ಥಜೀವನಕ್ಕೆ ಇಬ್ಬರ ಮನಸ್ಸನ್ನೂ ಹೇಗೆ ಸಜ್ಜುಗೊಳಿಸುತ್ತಿವೆ ಈ ಮಂತ್ರಗಳು.
ಸಾಮಾನ್ಯರಲ್ಲಿ ವಿವಾಹಕ್ಕೆ ಅರ್ಹತೆಯೆಂದರೆ ಮೈಬಲಿತಿರುವುದು, ಅದಕ್ಕೆ ತಕ್ಕ ವಯಸ್ಸು – ಇಷ್ಟೇ. ಆದರೆ ಉನ್ನತ ಧ್ಯೇಯಸಾಧನೆಯೇ ಪ್ರಧಾನವಾಗಿರುವ ಜ್ಞಾನಿಗಳ ದೃಷ್ಟಿಯಲ್ಲಿ ಅರ್ಹತೆ ಯಾವುದು ಎಂಬುದನ್ನು ಸಂಕ್ಷೇಪವಾದರೂ ಸುಂದರವಾಗಿ ತಿಳಿಸಲಾಗಿದೆ. ಅಂತೆಯೇ ಕಾಶೀಯಾತ್ರೆ, ಕನ್ಯಾದಾನ, ಇತ್ಯಾದಿ ಇತರ ವಿವರಗಳನ್ನೂ ಒಳಗೊಂಡಿದೆ ಈ ಹೊತ್ತಿಗೆ. ಒಟ್ಟಾರೆ, ಇಂದ್ರಿಯ ಸುಖವು ಹೇಗೆ ಪರಮಾರ್ಥದ ಅಧಾರದ ಮೇಲೆ ನಿಲ್ಲಿಸಲ್ಪಟ್ಟಿದೆ ಎಂಬುದಕ್ಕೆ ವಿವಾಹದ ಪ್ರತಿ ಅಂಗವೂ ಕೂಡ ದಿಗ್ದರ್ಶಕವಾಗಿದೆ ಎಂಬಂಶವನ್ನು ಎತ್ತಿ ತೋರಿಸುತ್ತಿದೆ ಈ ಕಿರು ಗ್ರಂಥರತ್ನ. (ವಿವಾಹ ಸಂಸ್ಕಾರದ ವಿಚಾರವಾಗಿ ವಿಸ್ತಾರವಾದ ಗ್ರಂಥ ಒಂದು ಲೋಕಾರ್ಪಣೆಗೆ ಸಿದ್ಧವಾಗುತ್ತಿದೆ ಎಂಬುದನ್ನು ಪ್ರಾಸಂಗಿಕವಾಗಿ ತಿಳಿಸುತ್ತೇವೆ.)