ಗ್ರಂಥ - "ಮಹಾಗುರು ನಿರ್ಮಿಸಿದ ಮಹಾ ಶಿಲ್ಪ –ಶ್ರೀ ಶ್ರೀ ರಂಗಪ್ರಿಯ ಸ್ವಾಮಿಗಳು" (ಸ್ಮರಣ ಸಂಪುಟ) ಪರಮ ಪೂಜ್ಯರಾದ ಶ್ರೀ ರಂಗಪ್ರಿಯಸ್ವಾಮಿಗಳು ಈ ಸಮಾಜ ಕಂಡ ಒಬ್ಬ ಅಪರೂಪದ ಸಂತ, ಜ್ಞಾನಿ, ಅನುಭಾವಿ. ಅವರು ೨೦೧೨ ರಲ್ಲಿ ಪರಮಪದವನ್ನು ಹೊಂದಿದಾಗ ಅವರ ಪರಿಚಯವಿದ್ದ ಎಲ್ಲ ಸಹೃದಯರಿಗೂ ಮಹಾಘಾತ. ಅಧ್ಯಾತ್ಮ ಲೋಕದ ದಿಗ್ಗಜ, ಶಾಸ್ತ್ರ ಕೋವಿದ, ಸಮನ್ವಯ ವೇದಾಂತ ಪ್ರತಿಪಾದಕ, ಮಹಾ ಸನ್ಯಾಸಿ,ಪರಮ ಕರುಣಾ ಮೂರ್ತಿ, ಇಷ್ಟೆಲ್ಲಾ ವಿಶೇಷತೆಗಳಿದ್ದರೂ ಅತ್ಯಂತ ಸರಳರೂ, ಸುಲಭರೂ ಆಗಿ ಸುಮಾರು ಏಳು ದಶಕಗಳ ಕಾಲ ಭಾರತೀಯ ಸಂಸ್ಕೃತಿಯ ಸೇವೆಗಾಗಿಯೇ ತಮ್ಮ ಜೀವಿತವನ್ನು ತೇಯ್ದ ಅವಿಸ್ಮರಣೀಯ ಚೇತನ ಶ್ರೀ ರಂಗಪ್ರಿಯ ಸ್ವಾಮಿಗಳು ಎಂದರೆ ಅವರ ಸಾಮೀಪ್ಯಕ್ಕೆ ಬಂದ ಯಾರಿಗೂ ಅತ್ಯುಕ್ತಿ ಎನಿಸದು. ಯಾರು ಯಾರು ಅವರ ಪವಿತ್ರ ಸನ್ನಿಧಿಗೆ ಬಂದಿದ್ದರೋ ಅವರೆಲ್ಲರ ಭಾವ ವೈಭವ, ಶಬ್ದಗಳಲ್ಲಿ ಎಷ್ಟು ವ್ಯಕ್ತವಾಗಬಹುದೋ ಅಷ್ಟನ್ನು ತಮ್ಮ ತಮ್ಮ ಭಾಷೆಯಲ್ಲಿ ಅರುಹಿದ ಗ್ರಂಥಕುಸುಮವೇ "ಮಹಾಗುರು ರೂಪಿಸಿದ ಮಹಾಶಿಲ್ಪ-ಶ್ರೀ ಶ್ರೀ ರಂಗಪ್ರಿಯ ಸ್ವಾಮಿಗಳು" ಮುಗ್ದ ಭಕ್ತಿಯ ಕಣ್ಣೀರಿನವರಿಂದ ಮಹಾ ಜ್ಞಾನಿಗಳ ವರೆಗೆ ಸ್ವಾಮಿಗಳ ಹತ್ತಿರ ಮಾರ್ಗದರ್ಶನಕ್ಕಾಗಿ ಬರುತ್ತಿದ್ದುದು ಅವರ ಅಂತರಂಗದ ಐಶ್ವರ್ಯಕ್ಕೆ ಮತ್ತು ಹೊರಜೀವನದ ಸಾರಳ್ಯಕ್ಕೆ ಒಂದು ನಿದರ್ಶನ. ಅವರು ವಿರಕ್ತರು,ಶಾಂತರು,ಮಹಾಂತರು,ಅದ್ಭುತ ಆಧ್ಯಾತ್ಮಿಕ ರಸಾನುಭವಿಗಳು,ಯೋಗಿಗಳು,ಮತ್ತು ನಿಷ್ಠಾವಂತ ಗುರುಭಕ್ತರು. ಅವರ ಗುರುಗಳಾದ ಶ್ರೀರಂಗ ಮಹಾಗುರುಗಳ ಹೆಜ್ಜೆಗೆ ಗೆಜ್ಜೆಯಾಗಿದ್ದವರು. ಶ್ರೀ ಶ್ರೀಗಳ ಲೌಕಿಕ ವಿದ್ಯಾಭ್ಯಾಸ-ಸಂಸ್ಕೃತ ಎಂ.ಎ,ವೇದಾಂತ, ಧರ್ಮ, ನ್ಯಾಯ, ಅಲಂಕಾರ ಶಾಸ್ತ್ರ ಪಾರಂಗತರು.ಭಾಷಾ ಪ್ರೌಡಿಮೆಯನ್ನು ತೆಗೆದುಕೊಂಡರೆ ಸಂಸ್ಕೃತ, ಹಿಂದೀ, ಕನ್ನಡ, ತಮಿಳು, ಪ್ರಾಕೃತ, ಪಾಳೀ, ಇಂಗ್ಲೀಷ್ ಭಾಷೆಗಳಲ್ಲಿ ಪ್ರಭುತ್ವ ಸಂಪನ್ನರು. ಸಾಮಾಜಿಕವಾಗಿ, ಅಷ್ಟಾಂಗ ಯೋಗ ವಿಜ್ಞಾನ ಮಂದಿರದ ಬೆಂಗಳೂರು ಶಾಖೆಯ ಕಾರ್ಯದರ್ಶಿಗಳಾಗಿದ್ದರು. ಶ್ರೀಮದ್ರಾಮಾಯಣ, ಶ್ರೀಮನ್ಮಹಾಭಾರತ, ಶ್ರೀಮದ್ಭಾಗವತ, ಹರಿವಂಶ,ಶ್ರೀ ಮಾರ್ಕಂಡೇಯ ಪುರಾಣ ಇತ್ಯಾದಿ ಮಹಾ ತತ್ತ್ವದರ್ಶನದಿಂದೊಡಗೂಡಿದ ಗ್ರಂಥಗಳ ಕನ್ನಡ ಅನುವಾದಕ್ಕೆ ಭಾರತ ದರ್ಶನ ಸಂಸ್ಥೆಗೆ ಪ್ರಧಾನ ಮಾರ್ಗದರ್ಶಕರಾಗಿದ್ದುದು ಜನಜನಿತವಾದ ವಿಷಯ. ತ್ರಿಮತಸ್ಥರಲ್ಲಿ ಸಮನ್ವಯ ದೃಷ್ಟಿಮೂಡಿಸಿ ಸಮಾಜವನ್ನು ಒಗ್ಗೂಡಿಸಿದ ಕೀರ್ತಿ ಅವರದು. ಬಡಬಗ್ಗರಿಗೆ, ರೋಗಿಗಳಿಗೆ ಆರ್ಥಿಕ,ವೈದ್ಯಕೀಯ ನೆರವನ್ನು ಎಲೆಮರೆಯ ಕಾಯಿಯಂತೆ ಇದ್ದು ಮಾಡುತ್ತಿದ್ದುದು ಅವರದೇ ವಿಶೇಷ. ಯಾವ ಮಠದ ಅಧಿಕಾರವನ್ನೂ ಅಪೇಕ್ಷಿಸದೇ ಸಮಾಜಕಲ್ಯಾಣವೊಂದನ್ನೇ ಗುರಿಯಾಗಿಸಿಕೊಂಡ ಅಪರೂಪದ ಸನ್ಯಾಸಿ. ಈ ಗ್ರಂಥದಲ್ಲಿ ಸುಮಾರು ೭೦ ಜನ ಮಹನೀಯರು ಅವರೊಡನೆ ಕಳೆದ ತಮ್ಮ ಚೇತೋಹಾರಿ ಅನುಭವ ಸುಧೆಯನ್ನು ನಿವೇದಿಸಿದ್ದಾರೆ. ಈ ಎಲ್ಲ ಲೇಖನಗಳೂ ನಮ್ಮ ಕಾಲದ ಒಬ್ಬ ಮಹಾಪುರುಷನಿಗೆ ಕಟ್ಟಿ ಹೆಣೆದ ಸುಗಂಧ ಕುಸುಮಗಳ ಮಾಲೆಯಂತಿವೆ. ಓದುಗರು ಒಂದೊಂದೂ ಲೇಖನದ ರಸಾಸ್ವಾದನೆ ಮಾಡಿ ಪೂಜ್ಯ ಶ್ರೀಗಳ ಮೇರುಸದೃಶ ವ್ಯಕ್ತಿತ್ವದಿಂದ ಆಕರ್ಷಿತರಾಗುವುದರಲ್ಲಿ ಅನುಮಾನವೇ ಇಲ್ಲ. ಅವರ ಈ ಭಗವತ್ಸೇವಾರೂಪವಾದ ಪ್ರವಚನದ ಸಾರಾಂಶದಿಂದ ಕೂಡಿದ ಈ ಹೊತ್ತಿಗೆಯು, ಅಧ್ಯಾತ್ಮದಲ್ಲಿ ಉತ್ಸುಕತೆ ಇರುವವರೆಲ್ಲರೂ ಅಗಾಗ ಓದಬೇಕಾದ ಉಪಯುಕ್ತ ಸಂಗ್ರಹ ಗ್ರಂಥವಾಗಿದೆ.