ಗ್ರಂಥ - ಸ್ತುತಿರತ್ನಮಾಲಾ (Stutiratnamala)
ಕನ್ನಡ ಜನತೆಗೆ ಚಿರಪರಿಚಿತರಾದ ಪೂಜ್ಯ ಶ್ರೀಶ್ರೀ ರಂಗಪ್ರಿಯ ಶ್ರೀ ಶ್ರೀಗಳ ವ್ಯಾಖ್ಯಾನ ಸಹಿತವಾದ ಕನ್ನಡ ಭಾಷಾಂತರವಾಗಿದೆ ಈ ಸ್ತುತಿರತ್ನಮಾಲಾ ಪುಸ್ತಕ. ಶ್ರೀ ಮಹಾವಿಷ್ಣುವಿನ ಮೂರು ಪ್ರಸಿದ್ಧ ಸ್ತೋತ್ರಮಾಲಿಕೆಗಳ ತತ್ವಾರ್ಥಗಳ ಅನಾವರಣರೂಪವಾಗಿದೆ. ಶ್ರೀಶಂಕರಭಗವತ್ಪಾದರಿಂದ ವಿರಚಿತ ವಿಷ್ಣುಪಾದಾದಿಕೇಶಾಂತಸ್ತೋತ್ರವು ಐವತ್ತೆರಡು ಪದ್ಯರತ್ನಗಳಿಂದ ಅಲಂಕೃತವಾದ ಶ್ರೇಷ್ಠಗ್ರಂಥ. ಇವರದ್ದೇ ಮತ್ತೊಂದು ವಿಷ್ಣುಷಟ್ಪದೀಸ್ತೋತ್ರ ಆರು ಪದ್ಯಕುಸುಮಗಳ ಗ್ರಂಥರೂಪವಾದ ಸಾಹಿತ್ಯ. ಕವಿತಾರ್ಕಿಕಕೇಸರಿ ಶ್ರೀ ವೇದಾಂತದೇಶಿಕರಿಂದ ವಿರಚಿತ ಭಗವದ್ಧ್ಯಾನಸೋಪಾನವು ಹನ್ನೆರಡು ಪದ್ಯಮಣಿಗಳಿಂದ ರೂಪುಗೊಂಡ ಶ್ರೇಷ್ಠವಾದ ಮುಕ್ತಾಮಾಲಾ.
ಮಹಾವಿಷ್ಣುವಿನ ಸೌಂದರ್ಯವನ್ನು ಪಾದಾದಿಕೇಶಾಂತಸ್ತೋತ್ರದಲ್ಲಿ ರಸ ಪೂರ್ಣವಾಗಿ ವರ್ಣಿಸಿದ್ದಾರೆ ಶ್ರೀಶಂಕರಭಗವತ್ಪಾದರು. ಉತ್ತಮವಾದ ರೀತಿಯಲ್ಲಿ ಅನುಸಂಧಾನ ಮಾಡಿದವರ ಚಿತ್ತದಲ್ಲಿ ಆ ಮೂರ್ತಿಯ ಚಿತ್ರವನ್ನು ಮೂಡಿಸಬಲ್ಲ ಮಹಾರತ್ನವಾಗಿದೆ ಈ ಕೃತಿ. ವಿಷ್ಣುಷಟ್ಪದೀ ಸ್ತೋತ್ರದಲ್ಲಿ, ಮಹಾವಿಷ್ಣುವನ್ನು ದರ್ಶನ ಮಾಡಲು ಸರ್ವರಲ್ಲಿಯೂ ಇರಬೇಕಾದ ಶಮ, ದಮ, ವಿನಯ ಇತ್ಯಾದಿ ಉತ್ತಮ ಗುಣಗಳನ್ನು ಕರುಣಿಸುವಂತೆ, ಲೋಕಜನರಪರವಾಗಿ ಭಗವಂತನಲ್ಲಿಪ್ರಾರ್ಥಿಸುತ್ತಾರೆ ಶಂಕರಭಗವತ್ಪಾದರು. ಭಗವಂತನ ದಿವ್ಯ ಮಂಗಳ ವಿಗ್ರಹವನ್ನು ಕಂಡು ಅನುಭವಿಸಿ, ಆಸ್ವಾದಿಸಿ, ಆ ಆನಂದಾನುಭವದೊಂದಿಗೆ ರಸಭರಿತವಾದ ಸ್ತೋತ್ರಗಳು ಶ್ರೀ ವೇದಾಂತದೇಶಿಕರ ಭಗವದ್ಧ್ಯಾನಸೋಪಾನ. ಭಕ್ತರು ಸ್ವಾಮಿಯ ಪಾದಾರವಿಂದಗಳಿಂದ ಪ್ರಾರಂಭಿಸಿ ಒಂದೊಂದು ಅವಯವವನ್ನಾಗಿ ಧ್ಯಾನಿಸುತ್ತಾ ಮೇಲೇರಿ, ಆನಂದನಿಧಿಯನ್ನು ಪೂರ್ಣವಾಗಿ ಧ್ಯಾನಿಸಿ ಆಸ್ವಾದಿಸಲು ಈ ಸ್ತೋತ್ರ ಸೋಪಾನದಂತಿದೆ.
ಅತ್ಯಂತ ಗಂಭೀರವಾದ ಈ ಆಚಾರ್ಯಕೃತಿಗಳ ಪರಿಶೀಲನೆಗೆ ಭಾಷಾಂತರ ಹಾಗೂ ವ್ಯಾಖ್ಯಾನಗಳು ಪಾವಟಿಗೆಯಂತಿವೆ. ಅನ್ವಯಾನುಸಾರ ಪದಗಳಿಗೆ ಕಲ್ಪಿಸಬೇಕಾದ ಅರ್ಥ, ಪದ-ಪದಾರ್ಥ ಜ್ಞಾನಕ್ಕೆ ಸಹಕಾರಿಯಾಗಿದೆ. ಸಂಸ್ಕೃತ ಭಾಷೆ ಪರಿಚಯ ಮಾಡಿಕೊಳ್ಳುತ್ತಿರುವವರಿಗೆ ಮತ್ತು ವಿಶೇಷ ಪರಿಚಯವಿಲ್ಲದವರಿಗೂ ಸಹ ಮಾರ್ಗದರ್ಶನವಾಗಿದೆ. ಪದ್ಯಗಳ ತಾತ್ಪರ್ಯವು,ಭಾವಾರ್ಥವನ್ನು ಗ್ರಹಿಸಲು ಮಾತ್ರವಲ್ಲದೆ, ವಿಶಿಷ್ಟವಿಚಾರಗಳನ್ನೂ ಸಹ ಮನದಟ್ಟು ಮಾಡಿಕೊಟ್ಟಿವೆ. ಅಲ್ಲಲ್ಲಿ ಪೂರ್ವೋತ್ತರ ಪದ್ಯಗಳ ಪರಸ್ಪರ ಸಂಬಂಧವನ್ನು ಎತ್ತಿಹೇಳಲಾಗಿದೆ. ಮಧ್ಯ ಮಧ್ಯದಲ್ಲಿ ಉಲ್ಲಿಖಿತವಾಗಿರುವ ಪ್ರಶ್ನೋತ್ತರಗಳು ಸಹೃದಯರಿಗೆ ಉಂಟಾಗಬಹುದಾದ ಸಂದಿಗ್ಧಗಳನ್ನೆಲ್ಲಾ ಬಗೆಹರಿಸಿ ಸತ್ಯದರ್ಶನದತ್ತ ಕೊಂಡೊಯ್ಯುವ ಪ್ರಯತ್ನದಲ್ಲಿ ತೊಡಗಿಸುವಂತಿದೆ. ಕಾವ್ಯಸ್ವರೂಪವನ್ನರಿಯಲು ಇಚ್ಚಿಸುವವರಿಗೆ ಶಬ್ದಾರ್ಥಾಲಂಕಾರಗಳ ಬಗ್ಗೆ ವಿವರಣೆ ಇದೆ. ವಿಷ್ಣುಪಾದಾದಿಕೇಶಾಂತಸ್ತೋತ್ರವು "ಸ್ರಗ್ಧರಾ" ವೃತ್ತದಲ್ಲಿ, ಭಗವದ್ಧ್ಯಾನಸೋಪಾನವು "ಮಂದಾಕ್ರಾಂತ" ವೃತ್ತದಲ್ಲಿ, ವಿಷ್ಣುಷಟ್ಪದೀಸ್ತೋತ್ರ "ಆರ್ಯ" ವೃತ್ತದಲ್ಲಿದ್ದು, ಇವುಗಳನ್ನು ಓದುವಾಗ/ಉಚ್ಚರಿಸುವಾಗ ಪದವಿಭಾಗ ಮಾಡುವ ಕ್ರಮವನ್ನೂ ಸೂಚಿಸಲಾಗಿದೆ.
ವಿಷ್ಣುಪಾದಾದಿಕೇಶಾಂತಸ್ತೋತ್ರದ ವ್ಯಾಖ್ಯಾನಕ್ಕೆ ಶ್ರೀ ಪೂರ್ಣ ಸರಸ್ವತೀಯವರ ಸಂಸ್ಕೃತ ವ್ಯಾಖ್ಯಾನವನ್ನು ಹಾಗೂ ಭಗವದ್ಧ್ಯಾನಸೋಪಾನಕ್ಕೆ ವ್ಯಾಖ್ಯಾನಮಾಡುವಾಗ, ಶ್ರೀ ಗೋಪಾಲ ತಾತಾಚಾರ್ಯರ ವ್ಯಖ್ಯಾನಗಳನ್ನೂ ಆಕರಗ್ರಂಥಗಳನ್ನಾಗಿ ಉಪಯೋಗಿಸಿದ್ದಾರೆ, ಶ್ರೀ ಶ್ರೀಯವರು. ಹೀಗೆ ಈ ಮೂರು ಸಾಹಿತ್ಯ ಕೃತಿಗಳೂ ತಮ್ಮದೇ ಆದ ಗಾಂಭೀರ್ಯದಿಂದ ಕೂಡಿದ್ದು,ಪರಮರಮಣೀಯವಾದರೂ, ಅಲ್ಲಲ್ಲಿ ನಾರಿಕೇಳಪಾಕದಂತಿದವೆ. ಪಂಡಿತರಿಗೂ ಸಹ ಮತ್ತೆ ಮತ್ತೆ ಅನುಸಂಧಾನದಿಂದ ಮಾತ್ರ ವೇದ್ಯವಾಗಬಲ್ಲ ಪದಬಂಧವುಳ್ಳದ್ದಾಗಿವೆ. ಇಬ್ಬರು ಆಚಾರ್ಯರುಗಳ ಅನುಭವರಸಾಮೃತವನ್ನು ಸಾಹಿತ್ಯದ ಮೂಲಕ, ಸರಿಯಾದ ಕ್ರಮದಲ್ಲಿ ಅನುಸಂಧಾನ ಮಾಡಲು, ಈ ಸಾಹಿತ್ಯಗಳ ಅರ್ಥ ತಿಳಿಯುವುದು ಆವಶ್ಯಕ ಮತ್ತು ಅನಿವಾರ್ಯವೇ ಆಗಿದ್ದರೂ ವ್ಯಾಖಾನಿಸುವುದು ಸುಲಭಸಾಧ್ಯವಲ್ಲ.
ಈ ಹಿನ್ನೆಲೆಯಲ್ಲಿ, ಭಾಗವತ್ತೋತ್ತಮ, ಜ್ಞಾನಿವರೇಣ್ಯ, ಯತಿಶ್ರೇಷ್ಠರಾದ ಶ್ರೀಶ್ರೀ ರಂಗಪ್ರಿಯ ಶ್ರೀ ಶ್ರೀಯವರು, ಅವರ ಜ್ಞಾನ ಮಾತಾ-ಪಿತ್ರುಗಳಾದ ಶ್ರೀರಂಗಗುರುಭಗವಂತ ಹಾಗೂ ಶ್ರೀವಿಜಯಾಂಬಿಕಾ ಮಾತೆಯವರ ಅನುಗ್ರಹದ ಬೆಂಬಲದಿಂದ ಬರೆದಿರುವ ಈ ಪುಸ್ತಕ, ಒಂದು ಉತ್ತಮ ಭಾಷಾಂತರ ಹಾಗೂ ವ್ಯಾಖ್ಯಾನ ಮಾತ್ರವಾಗಿರದೆ, ಒಂದು ಸ್ವತಂತ್ರ ಕೃತಿಯೂ ಆಗಿದೆ ಎನ್ನಬಹುದು. ಈ ಪುಸ್ತಕದಲ್ಲಿರುವ ಕನ್ನಡ ಅನುವಾದ, ಅನ್ವಯಾನುಸಾರ ಪದಗಳ ಅರ್ಥ, ವಿವರಣೆ ಹಾಗೂ ವಿಶೇಷಾರ್ಥಗಳನ್ನು ಉಲ್ಲೇಖಿಸಿ,ಪಂಡಿತರಿಂದ ಪಾಮರವರೆಗೆ ಎಲ್ಲರಿಗೂ ಪರಮೋಪಕಾರವನ್ನು ಮಾಡಿದ್ದಾರೆ ಶ್ರೀಶ್ರೀ ರಂಗಪ್ರಿಯ ಶ್ರೀ ಶ್ರೀಃ.