ಗ್ರಂಥ - ವಿಚಾರಸುಮನೋಮಾಲಾ ಅನ್ಯಾದೃಶವಾದ ಆತ್ಮ ಮತ್ತು ಬುದ್ಧಿವೈಭವಗಳಿಂದ ಸಂಪನ್ನವಾಗಿ, ಭಾರತೀಯ ಋಷಿಸಂಸ್ಕೃತಿಯ ತಾತ್ವಿಕನೆಲೆಗೆ ಶಿಷ್ಯರನ್ನು ಕರೆದೊಯ್ದವರೇ ಯೋಗಿವರೇಣ್ಯರಾದ ಶ್ರೀರಂಗಗುರುಗಳು. ಶ್ರೀ ಶ್ರೀ ರಂಗಪ್ರಿಯ ಶ್ರೀಃ ಶ್ರೀಃ ರವರು (ಸ್ವಾಮಿಗಳು) ಅವರ ಪೂರ್ವಾಶ್ರಮದ ಕಾಲದಲ್ಲಿ ಅವರ ಗುರುಗಳಾದ ಶ್ರೀರಂಗಗುರುಗಳಿಂದಲೇ "ರಂಗಪ್ರಿಯ" ಎಂದೆನಿಸಿಕೊಂಡವರು. ಏಳುದಶಕಗಳಿಗೂ ಹಿಂದೆ ಶ್ರೀಗುರುಗಳು ಶ್ರೀ ಸ್ವಾಮಿಗಳ ಪೂರ್ವಾಶ್ರಮದ ಕೆಲವು ಸಂದರ್ಭಗಳಲ್ಲಿ ಸ್ವಾಮಿಗಳ, ಮತ್ತು ಇತರ ಶಿಷ್ಯರೊಂದಿಗೆ ಮುಕ್ತ ವಾತಾವರಣದಲ್ಲಿ, ಪ್ರಶ್ನೋತ್ತರರೂಪದಲ್ಲಿ ಸಂಭಾಷಣೆಗಳನ್ನು ನಡೆಸಿದ್ದರು. ಇದರಲ್ಲಿ ಶ್ರೀಗುರುಗಳು ಗಹನವಾಗಿರುವ ತತ್ವಗಳನ್ನು ಸುಲಭರೀತಿಯಲ್ಲಿ ಬೋಧನೆ ಮಾಡಿದ್ದರು.ಶ್ರೀ ಸ್ವಾಮಿಗಳು ಆ ಸಂಭಾಷಣೆಗಳನ್ನು ಲೋಕೊಪಕಾರಕ್ಕಾಗಿ ತಮ್ಮ ಲೇಖನಿಯಿಂದ ಗ್ರಂಥರೂಪಕ್ಕಿಳಿಸಿ ಭಗವದರ್ಪಣಮಾಡಿದ ಗ್ರಂಥ ಕುಸುಮವೇ “ವಿಚಾರ ಸುಮನೋ ಮಾಲಾ”. ಗ್ರಂಥವು ಎರಡು ಭಾಗದಲ್ಲಿದೆ. ಮೊದಲನೆಯ ಭಾಗದಲ್ಲಿ (ವಿಷಯಸೂಚಿ ೧ ರಿಂದ ೧೨) ಶ್ರಿಗುರು-ಶಿಷ್ಯರ ಸಂಭಾಷಣೆ, ಎರಡನೆಯ ಭಾಗದಲ್ಲಿ (ವಿಷಯಸೂಚಿ ೧೩ ರಿಂದ ೨೪), ಶ್ರೀಗುರುಗಳ ತತ್ವಬೋಧನೆಯ ವಿಷಯಗಳು. ಜ್ಞಾನಿಗಳು ದೇವಾಲಯದಲ್ಲಿ ವಿಶೇಷದೇವರದರ್ಶನ ಮಾಡುವುದೇಕೆ? ಕಲ್ಲಿಗ್ಯಾಕಾ ತೆಂಗಿನಕಾಯಿ ಒಡೆಯುವುದು? ಎಂಬ ದುರಹಂಕಾರದ ಪ್ರಶ್ನೆ. ಭಕ್ತರನ್ನು ಕಾಡುವ "ಶಿವ ದೊಡ್ಡವನೋ, ವಿಷ್ಣು ದೊಡ್ಡವನೋ " ಎಂಬ ಪ್ರಶ್ನೆ,ಯೋಗದ ಗೊಡವೆಯೇ ಬೇಡ, ಹರಿಕಥೆದಾಸರು ಹೇಳುವ ನಾಮಸ್ಮರಣೆ ದೋಸೆ ತಿನ್ನುವಷ್ಟು ಸುಲಭವಲ್ಲವೆ?" ಭರತನು ಚಿನ್ನದಪಾದುಕೆಗಳನ್ನು ಏಕೆ ತಂದಿದ್ದ ? ಮಾರೀಚಮಾಯಾಮೃಗವನ್ನು ಶ್ರೀರಾಮನು ಸಂಹಾರ ಮಾಡಿದಾಗ, ಸೀತೆಯು ಲಕ್ಷ್ಮಣನ ಮೇಲೆ ನಿಂದಾವಾಕ್ಯಗಳನ್ನಾಡುವುದೇಕೆ? ಮುಂದೆ ಸೀತೆಯು ಏಕೆ ಲಕ್ಷ್ಮಣನಲ್ಲಿ ಕ್ಷಮೆಯನ್ನು ಯಾಚಿಸುವುದಿಲ್ಲ. ಇಂತಹ ಪ್ರಶ್ನೆಗಳಿಗೆ ತೀರ್ಥಸ್ವರೂಪರಾದ, ವೇದಮೂರ್ತಿಗಳಾದ ಶ್ರಿಗುರುಗಳ ಅನ್ಯಾದೃಶವಾದ ಉತ್ತರಗಳು ಇಲ್ಲಿವೆ. ದುರಹಂಕಾರದ ಪ್ರಶ್ನೆಗೆ ಖಂಡತುಂಡವಾದ ಉತ್ತರವನ್ನಿಲ್ಲಿ ಕಾಣಬಹುದು, ಮತಾಂಧರನ್ನು ಸನ್ಮಾರ್ಗದಲ್ಲಿ ಒಯ್ಯುವಂತಹ ಉತ್ತರಗಳಿಲ್ಲಿದೆ. ಇಂತಹ ಇನ್ನೂ ಕೆಲವು ಉಪಯುಕ್ತ ಪ್ರಶ್ನೋತ್ತರ ರೂಪದ ಸಂವಾದಗಳನ್ನು ಇಲ್ಲಿ ಕಾಣಬಹುದು. ಭಾಗ-೨ರಲ್ಲಿ ಸರ್ವವೇದಪ್ರತಿಪಾದ್ಯನಾದ ಗುರುಪರಮಾತ್ಮನು ಕೊಟ್ಟ ದಿವ್ಯಸ್ಫೂರ್ತಿಯಿಂದ ಸ್ವಾಮಿಗಳು ಅನೇಕ ಸದ್ವಿಚಾರಗಳನ್ನು, ಸಜ್ಜನರಿಗೆ ಪ್ರಿಯವಾದ ವಿಷಯಗಳನ್ನು, ಶಾಸ್ತ್ರ ಮತ್ತು ಗುರೂಪದೇಶದ ಆಧಾರದ ಮೇಲೆ ಮಂಡಿಸಿದ್ದಾರೆ. ಆಧುನಿಕ ವಿಮರ್ಶಕರ ಕಲ್ಪಿತವಾದ ವ್ಯಾಖ್ಯಾನಗಳು ಸತ್ಯಕ್ಕೆ ಹೇಗೆ ದೂರವಾಗಿದೆಯೆಂಬುದನ್ನೂ ನಿರೂಪಿಸಿದ್ದಾರೆ. ದೇವತಾವಿಗ್ರಹ ಮತ್ತು ಸಾಲಿಗ್ರಾಮಶಿಲೆಗೆ ಸಂಬಂದಪಟ್ಟಹಾಗೆ ೧೩ ಪ್ರಶ್ನೆಗಳಿಗೆ, ರುದ್ರದೇವರ ಬಗ್ಗೆ, ಪೂರ್ಣಕುಂಭ ಮರ್ಯಾದೆಯ ಅರ್ಥದ ಬಗ್ಗೆ, ಯಾವುದನ್ನು ದೇವಭಾವವೆಂದು ಮಾನ್ಯಮಾಡಬೇಕು?- ಸಮಾಜ ಮತ್ತು ಕೃತಜ್ಞತೆ ಎಂಬುದರ ಬಗ್ಗೆಯೂ ಸ್ವಾಮಿಗಳು ಶಾಸ್ತ್ರಾಧಾರಿತವಾಗಿ ವಿಷಯವನ್ನಿಟ್ಟಿದ್ದಾರೆ. ಕಾಲಚಕ್ರದಲ್ಲಿ ಬರುವ ಮಾರ್ಗಶಿರಮಾಸವು ಹೇಗೆ ದೇವ-ಪಿತೃಕಾರ್ಯಕ್ಕೆ ಸಹಾಯಕವಾಗಿದೆ ಎಂಬುದರ ನಿರೂಪಣೆ, ಶ್ರೀರಾಮ, ಲಕ್ಶ್ಮಣ, ಭರತ ಮತ್ತು ಶತ್ರುಘ್ನ ಹೇಗೆ ಮಹಾವಿಷ್ಣುವಿನ ಅಂಶಗಳಾಗಿದ್ದಾರೆ ಎಂಬ ಸಿದ್ಧಾಂತ ಮತ್ತು ಕಡೆಯದಾಗಿ ಶ್ರೀಕೃಷ್ಣ, ಶ್ರೀನಟರಾಜ ಧರಿಸಲು ನವಿಲುಗರಿಯು ಹೇಗೆ ಯೋಗ್ಯದಿವ್ಯಾಲಂಕಾರವಾಗಿದೆ ಎಂಬುದರಸತ್ಯಾರ್ಥವನ್ನು ಶ್ರೀ ಸ್ವಾಮಿಗಳು ನಿರೂಪಣೆ ಮಾಡಿದ್ದಾರೆ. ಈ ಪುಸ್ತಕವನ್ನು ಓದಿದ ಸಹೃದಯರಿಗೆ ನಮ್ಮ ಸಂಸ್ಕೃತಿ ವಿಷಯಕವಾದ ಬಂದಿರುವ, ಮುಂದೆ ಬರಬಹುದಾದ ಅನೇಕ ಪ್ರಶ್ನೆಗಳಿಗೆ ಮನಸ್ಸಿಗೆ ಮುಟ್ಟುವ ಸಮಾಧಾನ ದೊರಕುವುದಂತೂ ನಿಶ್ಚಿತ.