ಗ್ರಂಥ - ಆಹಾರ-ಆರೋಗ್ಯ - ಆಧ್ಯಾತ್ಮ (Ahahaara - Arogya - Adhyatma) ಸಮತೋಲನ ಆಹಾರದಿಂದ ಆರೋಗ್ಯ ಸಿದ್ಧಿ ಹಾಗೂ ಆರೋಗ್ಯಯುತ ದೇಹದಿಂದ ಆಧ್ಯಾತ್ಮ ಸಾಧನ ಎಂಬುದು ಸಾಮಾನ್ಯ ನೋಟಕ್ಕೆ ಸಿಲುಕುವ ವಿಷಯ. ಆದರೆ ಋಷಿಗಳು ಕೃಷಿಮಾಡಿಕೊಂಡು ಬಂದಂತಹ ವಿಷಯಗಳ ನೋಟರೂಪವಾದ ಆಹಾರ ಸಂಗ್ರಹ, ಸಿದ್ಧತೆ, ವಿನಿಯೋಗ ಇತ್ಯಾದಿಗಳ ಮಾಹಿತಿ ಶಾಸ್ತ್ರೀಯ ಹಾಗೂ ಮಾನ್ಯನೀಯ ಎಂದು ಗ್ರಂಥ ಕರ್ತರು ಅರ್ಥಪೂರ್ಣವಾಗಿ ನಮ್ಮ ಮುಂದಿಟ್ಟಿದ್ದಾರೆ. ಅನ್ನದ ಅವಶ್ಯಕತೆ , ಆಹಾರ ತಯಾರಿಕಾ ವಿಧಾನ, ಆಹಾರ ಸ್ವೀಕಾರ ವಿಧಾನ, ಭೋಜನ ಪಾತ್ರೆಗಳು, ಆಹಾರ ಸ್ವೀಕಾರ-ಆಸನ, ಪ್ರಾಣಾಗ್ನಿ ಹೋತ್ರ, ಅತೀಂದ್ರಿಯ ವಿಜ್ಞಾನ, ಹಾಗೂ ಆಹಾರ ಸೇವನೆಯ ಪರಮ ಪ್ರಯೋಜನ ಹೀಗೆ ಕ್ರಮವಾಗಿ ಗುರು-ವಿಚಾರಪೂರ್ವಕವಾಗಿ ಹೃನ್ಮನಗಳಿಗೆ ನಾಟುವಂತೆ ಲೇಖಕರು ವಿಷಯಗಳನ್ನು ಮಂಡಿಸಿದ್ದಾರೆ. ಜೀವ ಲೋಕದ ಪ್ರಥಮ ಅಗತ್ಯವೂ, ಸೃಷ್ಟಿಯ ಮೂಲ ರೂಪವೂ ಅನ್ನವೇ ಆಗಿದೆ ಎಂಬುದಾಗಿ ವೇದ-ಉಪನಿಷತ್ತುಗಳು ಉಲ್ಲೇಖಗಳನ್ನು ಸಂದರ್ಭೋಚಿತವಾಗಿ ತೆಗೆದುಕೊಂಡು ಅನ್ನ ದೇವತಾರೂಪಗಳನ್ನು ಹಾಗೂ ಸ್ಥಾವರ-ಜಂಗಮಾತ್ಮಕವಾದ ಆಹಾರಗಳನ್ನು ತಿಳಿಸಲಾಗಿದೆ. ಜೊತೆಗೆ ನಿಷೇಧ ಮಾಡಿರುವ ಆಹಾರ ಪದಾರ್ಥಗಳ ಹಿನ್ನೆಲೆಯನ್ನು ಅವಲೋಕಿಸಲಾಗಿದೆ. ಸಹಜ-ಸಮಗ್ರ ವಿಕಾಸದಲ್ಲಿ ಷಡ್ರಸಗಳ ಪಾತ್ರದ ಋಷಿನೋಟದ ಒಳ ಧರ್ಮದ ಮರ್ಮಗಳನ್ನು ತುಂಬು ನೋಟದಿಂದ ವಿವೇಚನೆ ಮಾಡಲಾಗಿದೆ. "ಅಡಿಗಡಿಗೆ ಭಗವತ್ಸ್ಮರಣೆಯನ್ನು ತಂದುಕೊಡುವ ಅಡುಗೆಯೇ, ಅಡುಗೆ" ಎಂಬ ಗುರುವಾಕ್ಯದಂತೆ ಪರಿಣಾಮ ದೃಷ್ಠಿಯಿಂದ ಗಮನಿಸಿ ಆಹಾರವನ್ನು ಸಾತ್ವಿಕ, ರಾಜಸ, ತಾಮಸ ಎಂಬುದಾಗಿ ಗುರುತಿಸಿ ಯಾರಿಗೆ ಯಾವ ಆಹಾರ ಸೇವ್ಯ ಹಾಗೂ ವರ್ಜ್ಯ ಎಂಬುದಾಗಿ ವಿಭಾಗಿಸಲಾಗಿದೆ. ಆ ಮರ್ಮವರಿತು, ಹದವರಿತು ಬಳಸಿದಲ್ಲಿ ರಸರೂಪಿಯಾದ ಭಗವಂತನ ನೆಲೆಮುಟ್ಟಿಸುವಳು, ಕಲೆಗಳ ತಾಯಿ ಈ ಪಾಕ ಕಲೆ. ದೇಹಪುಷ್ಟಿ ಮನಸ್ತುಷ್ಟಿ ಹಾಗೂ ತತ್ವದೃಷ್ಟಿಗಳಿಂದ ಬೆಳೆದು ಬಂದ ಪಾಕಕಲೆ ಉದರ ತೃಪ್ತಿ ಮಾತ್ರವಲ್ಲದೆ ದಾಮೋದರ ತೃಪ್ತಿಯನ್ನೂ ರೂಪಿಸುವ ಕಲೆಯಾಗಬೇಕು ಎಂಬುದು ಲೇಖಕರು ತೆರೆದಿಟ್ಟ ಸಹಜ ನಿಜ. ಆಹಾರ ಸೇವನೆಯ ವಿಷಯದಲ್ಲಿ ಆಧುನಿಕರ ಅಪೂರ್ಣನೋಟವನ್ನು ಹಾಗೂ ಪರಿಪೂರ್ಣವಾದ ಋಷಿ ನೋಟದ ಸ್ವಾರಸ್ಯವನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ವಸ್ತ್ರವಿನ್ಯಾಸದ ವೈಜ್ಞಾನಿಕ ಹಿನ್ನೆಲೆ, ಪುಂಡ್ರಧಾರಣೆಯ ವಿಶೇಷತೆ, ಸ್ಥಳ ಶುದ್ಧಿಯ ನೈಜತೆ, ಭೋಜನ ಪಾತ್ರೆಗಳ ಗುಣಧರ್ಮದ ಅಳತೆಗೆ ಗುರುವು ಕೊಟ್ಟ ನಾಡಿವಿಜ್ಞಾನದ ಮರ್ಮ, ಭೋಜನಕ್ಕೆ ಸಮ್ಮತವಾದ ಎಲೆಗಳ ಗುಣ ವಿಶೇಷತೆ, ಭೌತಿಕ-ದೈವಿಕ-ಆಧ್ಯಾತ್ಮಿಕ ಈ ಮೂರು ಕ್ಷೇತ್ರಗಳಿಗೆ ಒಪ್ಪುವ ಆಸನಗಳ ಪಾತ್ರ, ಪಂಕ್ತಿ ಭೋಜನದ ನಿಯಮಗಳು, ಆಹಾರ ಬಡಿಸುವ ಕ್ರಮ ಮತ್ತು ಮನೋಧರ್ಮ, ಪ್ರಾಣಾಗ್ನಿಹೋತ್ರಗಳ ವಿಶೇಷ ನೋಟ, ಆಹಾರ ಸೇವನೆಯ ಪ್ರಮಾಣ,ಆಹಾರ ಸೇವನೆಯ ಸಮಯದಲ್ಲಿ ಕೈ ಮತ್ತು ಬೆರಳುಗಳ ಸಕ್ರಿಯ ಬಳಕೆ, ಭೋಜನ ನಂತರ ವಿಧಿಗಳು ಹೀಗೆ ಲೇಖಕರು ಹತ್ತಾರು ವಿಷಯಗಳನ್ನು ಹೊಂದಿಸಿ ಒಂದುಗೂಡಿಸಿದ್ದಾರೆ. ಪಾಂಚಭೂತಾತ್ಮಕವಾದ ಶರೀರವನ್ನು ಷಡ್ರಸಗಳ ಸಮುಚಿತ ಸೇವನೆಯ ಮೂಲಕ ಸರ್ವೋತೋಮುಖವಾಗಿ ಬೆಳೆಸುವುದೇ ಆಹಾರವಿಧಾನದ ಗುರಿ. ಆಹಾರ ವಿಧಾನದಲ್ಲಿ ಯಾವುದೇ ಲೋಪವಿಲ್ಲದ ವಿಜ್ಞಾನವನ್ನು ಅಳವಡಿಸಿರುವ ಜಾಣ್ಮೆ ಋಷಿಗಳದ್ದು ಹಾಗೂ ತನ್ಮೂಲಕ ಸಂತೃಪ್ತಿಯ ನಲ್ಮೆಯ ಹಾದಿಯನ್ನು ತೋರಿದ್ದಾರೆಂಬುದನ್ನು ಮನದಟ್ಟಾಗುವಂತೆ ಲೇಖಕರು ವಿಷಯಗಳನ್ನು ಮಂಡಿಸಿದ್ದಾರೆ.