ಗ್ರಂಥ - ಅಷ್ಟಾಂಗಯೋಗ (Astanga Yoga) ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳ ಛಾಪಿನಿಂದ ಕೂಡಿದ ಈ ಗ್ರಂಥದ ಲೇಖಕರು ಡಾ|| ಎಸ್.ವಿ. ಚಾಮುರವರು. ಶ್ರೀರಂಗಮಹಾಗುರುಗಳ ಮೊಟ್ಟ ಮೊದಲಿನ ಶಿಷ್ಯರಲ್ಲಿ ಒಬ್ಬರು. ಯೋಗಾಸನವನ್ನು ಚೆನ್ನಾಗಿ ಅಭ್ಯಾಸ ಮಾಡಿದವರು. ಮಧ್ಯಪ್ರದೇಶದ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದು, ನಿವೃತ್ತಿಯನಂತರ ಶ್ರೀ ಮಂದಿರದ ಪ್ರಕಾಶನವಾದ ’ಆರ್ಯ ಸಂಸ್ಕೃತಿ’ ಎಂಬ ಮಾಸಪತ್ರಿಕೆಗಾಗಿ "ಅಷ್ಟಾಂಗಯೋಗ" ಎಂಬ ಲೇಖನ ಮಾಲೆಗಳನ್ನು ಬರೆದವರು. ಶ್ರೀರಂಗಮಹಾಗುರುಗಳು ಯೋಗ ಶಾಸ್ತ್ರದಬಗ್ಗೆ ಪಟ್ಟಿಮಾಡಿಸಿದ್ದ ಶ್ಲೋಕಗಳು ಹಾಗೂ ಅವರ ನಿಕಟ ಸಂಪರ್ಕದಿಂದ ದೊರೆತ ವಿವರಣೆಗಳ ಆಧಾರದ ಮೇಲೆ ವಿಷಯಗಳು ಬರೆಯಲ್ಪಟ್ಟಿದ್ದವು. ಓದುಗರ ಕೋರಿಕೆಯಂತೆ ಈ ಲೇಖನಗಳನ್ನು ಶೇಖರಿಸಿ ಹೊರತರಲ್ಪಟ್ಟ ಗ್ರಂಥವಿದು. ಯೋಗವಿದ್ಯೋಪಾಸಕರಾದ ಶ್ರೀರಂಗಗುರುಗಳು ಅಷ್ಟಾಂಗಯೋಗವೆಂಬುದು ಅಂತರಂಗದ ವಿಷಯ. ’ಜ್ಞಾನ’ ಎಂಬರ್ಥದಲ್ಲಿ ಬಳಸುತ್ತಿದ್ದರು. ಶ್ರೀರಂಗಗುರುಗಳ ಈ ವಿಚಾರ ಸರಣಿಯಲ್ಲಿ, ಮಾನವದೇಹವನ್ನು ಜ್ಞಾನ-ವಿಜ್ಞಾನ ಮಂದಿರವಾಗಿಸುವ ಅಷ್ಟಾಂಗಯೋಗವು, ಭಾರತೀಯ ಆರ್ಷಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ಹೆಣೆಯಲ್ಪಟ್ಟಿರುವುದರಿಂದ, ಯೋಗವಿದ್ಯೆಯ ಸ್ಥೂಲ ಪರಿಚಯವಿಲ್ಲದೆ, ಸಂಸ್ಕೃತಿ-ನಾಗರೀಕತೆಯ ವಿಷಯ ತಿಳಿಯಲು ಸಾಧ್ಯವಿಲ್ಲ ಎಂದು. ಇಂದು ಕಂಡುಬರುವ ಅನೇಕ ತಪ್ಪು ಅಭಿಪ್ರಾಯಗಳನ್ನು ಹೊಗಲಾಡಿಸಿ, ನಮ್ಮ ಸಂಸ್ಕೃತಿಯ ಬಗ್ಗೆ ಶ್ರದ್ಧೆ ಗಟ್ಟಿಯಾಗಿರಿಸಲು, ಮೂಲದಲ್ಲಿರುವ ಸತ್ಯಗಳ ನೈಜತೆಯನ್ನು ಮನಸ್ಸಿನಲ್ಲಿ ಧೃಡವಾಗಿಸಲು, ಯೋಗವೊಂದೇ ಮಾರ್ಗ - ಎಂದು ಈ ರಹಸ್ಯವನ್ನು ತಿಳಿದಿದ್ದರು ಮಹಾಮೇಧಾವಿ ಶ್ರೀರಂಗಮಹಾಗುರುಗಳು. ನಮ್ಮ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು, ಅಷ್ಟಾಂಗಯೋಗದ ಸ್ವರೂಪವನ್ನು ಯಥಾವತ್ತಾಗಿ ತಿಳಿಯಗೊಡಿಸುವ ಒಂದು ಗ್ರಂಥ ಬರೆಯುವುದು ಅವಶ್ಯವೆಂದು ಗುರುಗಳೇ ಬಗೆದಿದ್ದರು. ಪುಸ್ತಕದ ಪ್ರಾರಂಭದಲ್ಲಿ ಯೋಗವಿಕಾಸ, ಅದರ ಉತ್ಪತ್ತಿ, ಬೆಳೆದ ಕ್ರಮ, ಮೊಟ್ಟಮೊದಲು ಪ್ರಕಾಶಕ್ಕೆ ತಂದವರ ಪರಂಪರೆ, ಪ್ರಯೋಗ, ಅದರ ಬಗ್ಗೆ ಸಾಹಿತ್ಯ ಯಾವುವು ಎನ್ನುವ ವಿಷಯಗಳಿವೆ. ಮುಂದಿನ ಅಧ್ಯಾಯಗಳಲ್ಲಿ ಯೋಗ ಮತ್ತು ಶರೀರ ವಿಜ್ಞಾನ, ನಾಡಿ ಪ್ರಕರಣ, ಚಕ್ರ ಪ್ರಕರಣ, ಅಷ್ಟಾಂಗಯೋಗದ ಎಂಟು ಅಂಗಗಳು ತಿಳಿಸಿಕೊಡಲಾಗಿವೆ. ಅಷ್ಟಾಂಗಯೋಗದ ಉಸಿರಿನಂತಿರುವ ಕುಂಡಲಿನೀ, ಹಂಸವಿದ್ಯೆ, ನಾದಯೋಗ, ಯೋಗಸಿದ್ಧಿ ಇತ್ಯಾದಿ ವಿಷಯಗಳಿಂದ ಪರಿಪೂರ್ಣಗೊಂಡು ಗುರುಸ್ಮರಣೆಯೊಂದಿಗೆ ಮುಕ್ತಾಯಗೊಳ್ಳುತ್ತೆ ಪುಸ್ತಕ. ಯೋಗದ ಬಗ್ಗೆ ನೂರಾರು ಪುಸ್ತಕಗಳು ಈಗಲೂ ಪ್ರಕಟವಾಗುತ್ತಿರುವ ಕಾಲದಲ್ಲಿ ಮತ್ತೊಂದು ಪುಸ್ತಕವೇ, ಎಂದೆನಿಸಬಹುದು. ಯೋಗಕ್ಕೆ ಹೆಚ್ಚು ಮನ್ನಣೆ ದೊರಕಿರುವಂತೆ ಕಂಡರೂ, ಆತ್ಮಲಾಭವನ್ನುಂಟು ಮಾಡಲು ಕಾರಣವಾಗಿದ್ದ ಈ ವಿದ್ಯೆಯು ಇಂದು ಬಹಳ ನಷ್ಟಪ್ರಾಯವಾಗಿರುವಂತೆ ಕಾಣುತ್ತೆ. ಸೂಕ್ಷ್ಮ ಹಾಗೂ ಆಧ್ಯಾತ್ಮಿಕ ರಹಸ್ಯಗಳೆಲ್ಲ ಜನರ ಮನಸ್ಸಿನಿಂದ ಮರೆಯಾಗಿದೆ. ಆಸನಕ್ಕೆ ಪರಿಸೀಮಿತವಾಗಿದೆ. ಶ್ರೀರಂಗಗುರುಗಳ ಅಷ್ಟಾಂಗಯೋಗದಲ್ಲಿ ಜ್ಞಾನಕ್ಕೆ ಸಂಬಂಧಿಸಿದ ಅಂಶಗಳು ಪುನಃ ಪೂರ್ಣವಾಗಿ ಪ್ರಕಟವಾದುದ್ದನ್ನು ಶಿಷ್ಯರಾಗಿ ಕಂಡಿದ್ದರು ಶ್ರೀ ಚಾಮುಗಳು. ಶ್ರೀಗುರುಗಳ ಮಾರ್ಗದರ್ಶನದಲ್ಲಿ ಯೋಗದ ವ್ಯಾಪ್ತಿ ಎಷ್ಟು ದೊಡ್ಡದು ಮತ್ತು ಅದರ ಲಕ್ಷ್ಯ ಎಷ್ಟು ಉನ್ನತವಾದದ್ದು ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಂಡು, ಕಲಿತುದನ್ನು ಪ್ರಾಮಾಣಿಕವಾಗಿ ಲಿಖಿತ ಮಾಡಿದ್ದಾರೆ ಲೇಖಕರು. ಈ ರೀತಿಯಾಗಿ ಕೇವಲ ಪುರಾತನ ಕಾಲಕ್ಕೆ ಪರಿಮಿತವಾಗದೆ, ನಮ್ಮ ಕಾಲದಲ್ಲಿಯೂ ಜನರನ್ನು ಆಕರ್ಷಿಸುತ್ತಿರುವ ಯೋಗವಿದ್ಯೆಯನ್ನು ಕುರಿತು ಒಂದು ಸಂಗ್ರಹ ಪರಿಚಯ ಜನತೆಗೆ ಮುಟ್ಟಿಸುವುದು ಈ ಗ್ರಂಥದ ಉದ್ದೇಶವಾಗಿದೆ.