ಗ್ರಂಥ - ಶ್ರೀಗುರುಹೃದಯ ಮತ್ತು ಆರ್ಷಸಾಹಿತ್ಯ-೧ (Sriguruhrudaya mattu arsasahitya - 1) ಭಾರತೀಯ ಋಷಿಸಂಸ್ಕೃತಿಯ ತಾತ್ವಿಕನೆಲೆಗೆ ಶಿಷ್ಯರನ್ನು ಕರೆದೊಯ್ದವರೇ ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು. ಶ್ರೀಗುರುಗಳು ತತ್ವಮಾರ್ಗದೇಶಿಕರಾಗಿದ್ದು ಗಹನವಾಗಿರುವ ತತ್ವಗಳನ್ನು ಸುಲಭರೀತಿಯಲ್ಲಿ ಭೋದನೆ ಮಾಡುತ್ತಿದ್ದರು. ಆರ್ಯಧರ್ಮ ಭೋಧಕರಾಗಿದ್ದು, ಅವರು ಯಾವುದೇ ಶಾಸ್ತ್ರೇತಿಹಾಸಪುರಾಣಗಳ ವಾಕ್ಯಾವಲಂಬನವಿಲ್ಲದೇ ಕೇವಲ ತಮ್ಮ ಅನುಭವ-ಪ್ರಯೋಗ-ಮೇಧೆಗಳಿಂದ ಜ್ಞಾನವಿಜ್ಞಾನಗಳ ಸಂಪತ್ತನ್ನು ಲೋಕಕ್ಕೆ ಕೊಡಬಲ್ಲವರಾಗಿದ್ದರು. ಜೀವನಕ್ಕೆ ದಾರಿದೀಪವು ಶಾಸ್ತ್ರ. "ಯಶಾಸ್ತ್ರವಿಧಿಮುತ್ಸೃಜ್ಯ ವರ್ತತೇ ಕಾಮಕಾರತಃ| ನ ಸ ಸಿದ್ದಿವವಾಪ್ನೋತಿ ನ ಸುಖಂ ನ ಪರಾಂ ಗತಿಮ್||" ಆದ್ದರಿಂದ "ತಸ್ಮಾತ್ ಶಾಸ್ತ್ರಂ ಪ್ರಮಾಣಮ್ ತೇ ಕಾರ್ಯಾಕಾರ್ಯವ್ಯವಸ್ಥಿತೌ|" ಎನ್ನುವಂತೆ ಲೋಕಜೀವಿಗಳ ತಿಳುವಳಿಕೆಗಾಗಿ ಮತ್ತು ಶಾಸ್ತ್ರವಚನಗಳ ಮೇಲೆಯೇ ನಿಲುವನ್ನು ಹೊಂದಿರುವಂತಹವರಿಗಾಗಿ ಅವರು ಸತ್ಯಾಂಶಗಳನ್ನು ತಿಳಿಸುವ ಸೂಕ್ತ ಹಾಗು ಸಂದರ್ಭೋಚಿತವಾದ ವಾಕ್ಯಗಳನ್ನು, ಶ್ಲೋಕಗಳನ್ನು ಪಾಠಪ್ರವಚನಗಳಲ್ಲಿ ಉದ್ಧರಿಸುತ್ತಿದ್ದರು. ಪ್ರವಚನದ ಯಾವುದೇ ವಿಷಯವನ್ನು ಬಳಸಿಕೊಳ್ಳುವಾಗ ವಿಷಯವನ್ನು ತಂದ ಯೋಚನಾಶೀಲರನ್ನು ನೆನೆಸಿಕೊಳ್ಳುವುದು ಸತ್ಸಂಪ್ರದಾಯ. ಯೋಗಗಾಯಕರಾದ ಶ್ರೀಗುರುಗಳು ಅನೇಕ ಶ್ಲೋಕಗಳನ್ನು ತಮ್ಮ ಸ್ತೋತ್ರಗಾನದಲ್ಲಿಯೂ ಬಳಸುತ್ತಿದ್ದ ಮತ್ತು ಪ್ರವಚನಗಳಲ್ಲಿ ಗಾನರೂಪದಲ್ಲಿಡುತ್ತಿದ್ದ ಮಧುರ ನೆನಪುಗಳು ಅನೇಕರ ಸ್ಮೃತಿಯಲ್ಲಿ ಉಳಿದಿದೆ. ಶ್ರೀಗುರುಗಳು ವೇದೋಪನಿಷತ್ತುಗಳು, ಸ್ಮೃತೀತೀಹಾಸಪುರಾಣಗಳು, ತಂತ್ರಾಗಮಾದಿಗಳು, ನೀತಿವಾಕ್ಯಾದಿಗಳಿಂದ ಜೀವನಕ್ಕೆ ಕೈಪಿಡಿಯಾಗಿರಿವಂತಹ ಸೂಕ್ತಭಾಗಗಳನ್ನು ಅಕಾರಾದಿಕ್ರಮ ಮಾಡಿ ಜೋಡಿಸಿ ಗ್ರಂಥಲೇಖಕರಲ್ಲಿ ಕೊಟ್ಟು , "ಈ ನಮೂನೆಯಲ್ಲಿ ಇನ್ನೂ ಅನೇಕ ವಾಕ್ಯ-ಶ್ಲೋಕಾದಿಗಳನ್ನು ಸಂಗ್ರಹಿಸಬೇಕಪ್ಪ, ನಿನ್ನಿಂದಾದರೆ ಮಾಡು!" ಎಂದು ಆದೇಶಿಸಿದ್ದರು. ಈ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಗುರುಹೃದಯವನ್ನು ಅರಿಯುವ ಕಾರ್ಯದಲ್ಲಿ ಯಶಸ್ವಿಯಾಗಿಯಾಗಿರುವ ಹಿರಿಯ ಶಿಷ್ಯರಲ್ಲೊಬ್ಬರಾಗಿದ್ದ ಗುರುಪಾದಾಬ್ಜಸೇವೀ ವಿದ್ವಾನ್ ಶ್ರೀ ಎನ್.ಎಸ್. ರಾಮಭದ್ರಾಚಾರ್ಯರು ನಮ್ಮನ್ನು ಉಪಕೃತರನ್ನಾಗಿ ಮಾಡಿದ್ದಾರೆ. ಶ್ರೀರಂಗಮಹಾಗುರುಗಳು ಹೀಗೆ ಉದ್ಧರಿಸುತ್ತಿದ್ದ ವಾಕ್ಯಗಳು ಮಹರ್ಷಿಹೃದಯದ ಪ್ರಕಾಶವೇ ಆಗಿದೆ. ಅವುಗಳ ಮೂಲರೂಪ ಮತ್ತು ಕನ್ನಡ ಅನುವಾದದ ಏಕತ್ರಗ್ರಂಥಪುಷ್ಪವು ಶ್ರೀಗುರುಗಳ ತೊಂಬತ್ತೆನೆಯ ಜಯಂತ್ಯುತ್ಸವದಲ್ಲಿ ಗುರುಪಾದಾರವಿಂದಗಳಲ್ಲಿ ಸಮರ್ಪಿತವಾಗಿತ್ತು. ಈ ಗ್ರಂಥವು ಅಧ್ಯಯನಪರರಿಗೂ, ಶೋಧಕರಿಗೂ ಸಹಕಾರಿಯಾಗಿದೆ. ಪ್ರಕೃತ ಗ್ರಂಥದಲ್ಲಿ ಹನ್ನೊಂದು ಭಾಗಗಳಿವೆ- ಸಚ್ಚಿದಾನಂದ, ಶ್ರಿಕೃಷ್ಣಪರಂಜ್ಯೋತಿ, ಗುರುತತ್ವ, ಪ್ರಣವ, ಸೃಷ್ಟಿದರ್ಶನ, ನಾದ-ಸ್ವರಾಕ್ಷರಾದಿ ವಾಗ್ವಿಕಾಸ, ವೇದಮಾತಾ ಗಾಯತ್ರೀ, ವೇದಬ್ರಹ್ಮ, ದೇಹ-ದೇಹೀ, ಯೋಗಸಾಮ್ರಾಜ್ಯ, ಜ್ಞಾನಿ-ಜ್ಞಾನಸಾಧನೆ. ಕಡೆಯಲ್ಲಿ ಸುಮಾರು ಇಪ್ಪತ್ತು ಪುಟದ ಉದ್ದ್ರುತವಾದ ಶ್ಲೋಕಗಳ ಅನುಬಂಧ ತುಂಬ ಉಪಯುಕ್ತವಾಗಿದೆ. ಗ್ರಂಥದ ಬೆಲೆಯೂ ಕಡಿಮೆಯಾಗಿ ಎಲ್ಲ ಆಸ್ತಿಕ ಮಹಾಜನರ ಕೈಸೇರಬೇಕಾಗಿದೆ.