ಗ್ರಂಥ - ತತ್ತ್ವಾರ್ಥಸಾಹಸ್ರೀ (Tattvaartha Sahasri)
ಪರಾವರತತ್ತ್ವಗಳನ್ನು ತನ್ನ ತಪೋಜ್ಞಾನಸಮಾಧಿಗಳಿಂದ ಕರತಲಾಮಲಕವಾಗಿ ಕಂಡುಕೊಂಡು, ತನ್ನ ಆ ಸತ್ಯದರ್ಶನವನ್ನು ಶಿಷ್ಯರಿಗೆ ಕಾಲಕಾಲಗಳಲ್ಲಿ ವೈಜ್ಞಾನಿಕವಾದ ಮತ್ತು ಸರಳ ಸುಂದರವಾದ ರೀತಿಗಳಿಂದ ಬೋಧನೆ ಮಾಡಿದ ಮಹಾಪುರುಷ ಶ್ರೀರಂಗ ಮಹಾಗುರು. ಸನಾತನಾರ್ಯ ಮಹರ್ಷಿಗಳ ಸಂಸ್ಕೃತಿ, ಧರ್ಮ, ಕಲೆ, ವಿದ್ಯೆ ಹಾಗೂ ಜೀವನದ ನಾನಾ ಕ್ಷೇತ್ರಗಳ ಬಗ್ಗೆ ಮಹರ್ಷಿಗಳ ನೋಟವನ್ನು ತನ್ನ ಜ್ಞಾನವಿಜ್ಞಾನದೃಷ್ಟಿಯಿಂದ ಪುನರ್ದರ್ಶನಗೈದು ಲೋಕಕ್ಕೆ ಅನುಗ್ರಹಿಸಿದ ಮಹಾಮೇಧಾವಿಯಾಗಿದ್ದ ಮಹಾತ್ಮರಿವರು.
ಇಂತಹ ಮಹಾಗುರುವಿನಿಂದ ವಿದ್ಯಾಗ್ರಹಣ ಮಾಡಿದ ಸುಕೃತಿಗಳಲ್ಲಿ ಒಬ್ಬರು ವಿದ್ವಾನ್ ಎನ್.ಎಸ್.ರಾಮಭದ್ರಾಚಾರ್ಯರು. ಶ್ರೀಯುತರು ಅದ್ವಿತೀಯ ವಿದ್ವಾಂಸರೂ, ವಿಚಾರಶೀಲರೂ, ವಿಮರ್ಶ್ಕರೂ ಆಗಿದ್ದರು. ಶ್ರೀರಂಗಮಹಾಗುರುಗಳೊಡನೆ ಸುದೀರ್ಘಕಾಲದ ಸಂಪರ್ಕಸೌಭಾಗ್ಯವನ್ನು ಪಡೆದಿದ್ದ ಧನ್ಯ ಜೀವಿಗಳು. ಮಹಾಗುರುಗಳು ಇವರ ಗೃಹಕ್ಕೆ ದಯಮಾಡಿಸಿದಾಗಲೂ, ಇವರು ಶ್ರೀಗಳನ್ನು ಅವರ ಗೃಹದಲ್ಲಿ, ಶ್ರೀಮಂದಿರದಲ್ಲಿ ಹಾಗೂ ಇತರ ಕಡೆಗಳಲ್ಲಿ ದರ್ಶನಮಾಡಿದ ಸಂದರ್ಭಗಳಲ್ಲೂ ಸನಾತನಾರ್ಯ ಭಾರತೀಯ ಮಹರ್ಷಿಗಳ ಸಂಸ್ಕೃತಿ, ನಾಗರೀಕತೆ ಹಾಗೂ ಜೀವನದ ವಿವಿಧ ಕ್ಷೇತ್ರಗಳ ಬಗೆಗೆ ಮಹರ್ಷಿಗಳ ನೋಟವೇನಿತ್ತು ಎಂಬ ವಚಾರವಾಗಿ ಉಪದೇಶಗಳನ್ನು ಪಡೆದಿದ್ದರು. ಅಷ್ಟೇ ಅಲ್ಲದೆ ತಾವು ಪಡೆದ ವಿಚಾರಗಳನ್ನ್ಜು ಧರಿಸಿ ಮುಂದಿನ ಪೀಳಿಗೆಗೆ ಅವುಗಳನ್ನು ಸೂಕ್ತ ವಿಧಾನದಲ್ಲಿ ತಿಳಿಯಗೊಡುವುದರಲ್ಲಿ ಇವರು ನಿಸ್ಸೀಮರಾಗಿದ್ದರು.
ಪ್ರಕೃತ ಗ್ರಂಥದಲ್ಲಿ ಇವರು ಶ್ರೀಗಳಿಂದ ಉಪದಿಷ್ಟವಾದ ಗಹನವಾದ ತತ್ತ್ವಗಳನ್ನು ವಿಶ್ಲೇಷಣೆ ಮಾಡಿ ಉಚಿತವಾದ ಉದಾಹರಣೆ ಉಪಪತ್ತಿಗಳೊಡನೆ ಸುಲಭವಾಗಿ ಬೋಧವಾಗುವಂತೆ ಸಂಸ್ಕೃತ ಪದ್ಯರೂಪದಲ್ಲಿ ನಿರೂಪಣೆ ಮಾಡಿದ್ದಾರೆ. ಪದ್ಯರೂಪದಲ್ಲಿರುವುದರಿಂದ ನೆನಪಿನಲ್ಲಿಟುಕೊಳ್ಳುವುದಕ್ಕೂ, ಆಸ್ವಾದನೆಗೂ ಸುಲಭವಾಗುತ್ತದೆ. ಸಂಸ್ಕೃತಜ್ಞರಲ್ಲದವರ ಉಪಯೋಗಕ್ಕಾಗಿ ಕನ್ನಡ ಅನುವಾದ ಹಾಗೂ ಕೆಲವು ಕಡೆಗಳಲ್ಲಿ ಸಂಕ್ಷಿಪ್ತ ವಿವರಣೆಗಳನ್ನೂ ನೀಡಿದ್ದಾರೆ.
ಶ್ರೀಗುರುಭಗವಂತನ ಉಪದೇಶಗಳಿಗೆ ಸಂವಾದಿಯಾಗಿರುವ ಶಾಸ್ತ್ರ ವಚನಗಳನ್ನೂ ಕೆಲವೆಡೆಗಳಲ್ಲಿ ಉದ್ಧರಿಸಿದ್ದಾರೆ. ಇದು ’ವಿಷಯ, ಪ್ರಯೋಗ, ಅನುಭವ-ಇಷ್ಟೇಪ್ಪಾ ನನ್ನ ಶಾಸ್ತ್ರ’ ಎಂಬ ಗುರುಭಗವಂತನ ಪ್ರತಿಜ್ಞೆಗೂ ಪೋಷಕವಗಿದೆ.
ಈ ಹೊತ್ತಗೆಯಲ್ಲಿ ಸುಮಾರು ೧೦೦೦ಕ್ಕೂ ಹೆಚ್ಚಿನ ಶ್ಲೋಕಗಳು ಅಡಕವಾಗಿವೆ. ಇಷ್ಟು ವಿಸ್ತಾರವಾಗಿದ್ದರೂ ’ವಿಷಯಗಳೆಲ್ಲಾ ಇಲ್ಲಿಗೇ ಮುಗಿಯಿತೆಂದಲ್ಲ. ಇನ್ನೂ ಸಾವಿರಾರು ವಿಷಯಗಳಿರುತ್ತವೆ. ಇದೊಂದು ದಿಗ್ದರ್ಶನಮಾತ್ರ’ ಎಂಬುದನ್ನು ಲೇಖಕರು ತಮ್ಮ ಮುನ್ನುಡಿಯಲ್ಲಿ ತಿಳಿಸಿದ್ದಾರೆ. ಅಂದರೆ ಶ್ರೀಗುರುವು ನೀಡಿದ ಉಪದೇಶಗಳು ಅದೆಷ್ಟು ಅಪಾರಸಾಗರದಂತಿರಬೇಕು?!
ಸೃಷ್ಟಿಯ ಬಗೆಗೆ ಒಂದು ಚಿಂತನೆ, ಪುರುಷಾರ್ಥಗಳು, ಸ್ತ್ರೀ-ಪುರುಷ, ವಿದ್ಯೆ, ವಿದ್ಯಾ ವಿಭಾಗ, ಮಾನವದೇಹ, ಗಾಯತ್ರೀ, ಪ್ರಾಣಾಯಾಮ ಮುಂತಾಗಿ ಅನೇಕ ವಿಚಾರಗಳನ್ನು ಸುಂದರವಾಗಿ ಬಿತ್ತರಿಸುವ ಪದ್ಯಕೋಶವಾಗಿದೆ ಈ ಗ್ರಂಥರತ್ನ.
ಒಟ್ಟಾರೆ ಈ ಗ್ರಂಥವು ವಿವಿಧ ಕ್ಷೇತ್ರಗಳಲ್ಲಿ ಶ್ರೀಗುರುವಿನ ವಿಚಾರ ಸರಣಿಯನ್ನು ಓದುಗರಿಗೆ ತೋರುವ ಕೈದೀವಿಗೆಯಾಗಿದೆ ಎಂಬುದನ್ನು ಹರ್ಷದಿಂದ ತಿಳಿಸುತ್ತೇವೆ.