ಅಷ್ಟಾಂಗಯೋಗ ವಿಜ್ಞಾನಮಂದಿರಂ


(AstangaYoga VijnanaMandiram)
(ಪರಿಚಯ - Introduction)

ಅಷ್ಟಾಂಗಯೋಗ ವಿಜ್ಞಾನಮಂದಿರ


'ಅಷ್ಟಾಂಗಯೋಗ' ಎನ್ನುವ ಪದವು ಸಂಪುಟಿತವಾಗಿ 'ಜ್ಞಾನ' ಜ್ಯೋತಿಯನ್ನು ಪ್ರತಿನಿಧಿಸುತ್ತದೆ. 'ವಿಜ್ಞಾನ' ಎಂಬ ಪದವು ಆ ಜ್ಯೋತಿಯ ವಿಸ್ತಾರವನ್ನೇ ಸೂಚಿಸುವುದಾಗಿದೆ. ಹೀಗಾಗಿ 'ಅಷ್ಟಾಂಗಯೋಗ ವಿಜ್ಞಾನಮಂದಿರ'ವು 'ಜ್ಞಾನವಿಜ್ಞಾನಮಂದಿರ' ಎಂಬುದರ ಪರ್ಯಾಯಪದವಾಗಿದೆ. ಜ್ಞಾನಜ್ಯೋತಿಯಿಂದ ಹೊರಹೊಮ್ಮಿಬಂದು ಭಾರತೀಯ ಮಹರ್ಷಿಗಳಿಂದ ಲೋಕದ ಮುಂದಿರಿಸಲ್ಪಟ್ಟ ಸಮಸ್ತ ವಿದ್ಯಾ ಪ್ರಪಂಚವನ್ನೂ ಇದು ಪ್ರತಿನಿಧಿಸುವ ಧ್ಯೇಯದಿಂದ ಕೂಡಿದೆ.

ಸ್ಥಾಪನೆ


ಅಷ್ಟಾಂಗಯೋಗವಿಜ್ಞಾನಮಂದಿರವೆಂಬ ಸಂಸ್ಥೆಯು ಶ್ರೀರಂಗಮಹಾಗುರುಗಳೆಂಬ ಯೋಗಿವರೇಣ್ಯರಿಂದ 1947ರಲ್ಲಿ ರೂಪತಳೆಯಿತು. ಮೊದಲು ಅವರ ಜನ್ಮಸ್ಥಳವಾದ ನಂಜನಗೂಡಿನ ಸಮೀಪದಲ್ಲಿರುವ ಹೆಡತಲೆ ಎಂಬ ಚಿಕ್ಕಗ್ರಾಮದಲ್ಲಿದ್ದ ಅವರ ಸ್ವಗೃಹದಲ್ಲಿ ಆರಂಭಗೊಂಡಿತು. ಕ್ರಮೇಣ ಅದರ ಕೇಂದ್ರ ಕಾರ್ಯಾಲಯವು ಮೈಸೂರಿಗೆ ಸ್ಥಳಾಂತರಗೊಂಡಿತು. ಜೊತೆಗೆ, ಬೆಂಗಳೂರು ಮತ್ತು ಚಿಕ್ಕಮಗಳೂರಿನ ಸಮೀಪದಲ್ಲಿರುವ ಬಸರೀಕಟ್ಟೆ ಗಳಲ್ಲಿ ಎರಡು ಶಾಖೆಗಳಾದವು.

ಮಂದಿರದಧ್ಯೇಯ


ಈ ಸಂಸ್ಥೆಯು ಆರ್ಯಭಾರತೀಯರ ಉಡಿಗೆ-ತೊಡಿಗೆ, ಆಹಾರ-ವಿಹಾರ, ನಡೆ-ನುಡಿ, ರಾಜನೀತಿ, ದೇಹದೇಶ ವಿಭಾಗ, ವಿದ್ಯೆ-ಕಲೆ ಇವುಗಳ ಒಳತತ್ತ್ವವನ್ನು ಹೊರಗೆಡಹುವ ಪ್ರಯತ್ನವನ್ನು ಪ್ರಧಾನ ಉದ್ದೇಶವನ್ನಾಗಿ ಹೊಂದಿದೆ. ಇವುಗಳೆಲ್ಲವನ್ನೂ ಕೂಡ ಸರಿಯಾದಕ್ರಮದಲ್ಲಿ ಅಳವಡಿಸಿಕೊಂಡಾಗ ಅವು ನಮ್ಮನ್ನು ಮತ್ತೆ ಅವುಗಳ ಉಗಮಸ್ಥಾನವಾದ ಪರಂಜ್ಯೋತಿಯೆಡೆಗೇ ಕರೆದೊಯ್ಯುತ್ತವೆ. ಈ ಸತ್ಯಾರ್ಥವನ್ನು ಮನವರಿಕೆ ಮಾಡಿಕೊಟ್ಟು ಮಹರ್ಷಿಸಂಸ್ಕೃತಿಯ ಪುನರುಜ್ಜೀವನವನ್ನು ಮಾಡುವುದೇ ಮಂದಿರದಧ್ಯೇಯವಾಗಿದೆ.

ಧ್ಯೇಯ ಸಾಧನೆಗಾಗಿ ಕೈಗೊಂಡಿರುವ ಕಾರ್ಯಗಳು


1. ಪ್ರಕಾಶನಗಳು

ಧ್ಯೇಯ ಸಾಧನೆಯ ನಿಟ್ಟಿನಲ್ಲಿ ಮಂದಿರದ ಪ್ರಕಾಶನಗಳು ಮುಖ್ಯ ಪಾತ್ರವನ್ನು ವಹಿಸುತ್ತಿವೆ. ಇವು ಋಷಿಸಂಸ್ಕೃತಿಯ ಸಮಸ್ತ ವಿಷಯಗಳನ್ನೂ ಒಳಗೊಂಡಿವೆ. ಇವುಗಳಲ್ಲಿ ಪ್ರಧಾನವಾದದ್ದು 23 ಸಂಪುಟಗಳಿಂದ ಕೂಡಿದ 'ಅಮರವಾಣೀ' ಗ್ರಂಥಮಾಲೆ. ಇವು ಮಹರ್ಷಿ ಸಂಸ್ಕೃತಿಯ ಅನೇಕಾನೇಕ ವಿಷಯಗಳನ್ನು ಕುರಿತು ಶ್ರೀರಂಗಮಹಾಗುರುಗಳು ಅಗಾಗ್ಗೆ ಮಾಡಿದ ಪ್ರವಚನ/ಸಂಭಾಷಣೆಗಳ ಸಂಕಲನಗಳನ್ನು ಒಳಗೊಂಡ ಅಮೂಲ್ಯ ಗ್ರಂಥರಾಶಿಯಾಗಿದೆ. 'ಭಾರತೀಯ ಹಬ್ಬ ಹರಿದಿನಗಳು' ಎಂಬ ಬೃಹತ್ಗ್ರಂಥವು ಭಾರತೀಯರ ಹಬ್ಬಗಳ ಆಚ್ಜರಣೆಯ ಔಚಿತ್ಯ, ಕಾಲ, ಕ್ರಮ, ಬಳಸಲ್ಪಡುವ ಪದಾರ್ಥಗಳು ಇವುಗಳ ಹಿಂದೆ ಅಡಗಿರುವ ವಿಜ್ಞಾನವನ್ನು ವಿಸ್ತಾರವಾಗಿ ತಿಳಿಸುತ್ತಾ ಜನಸಾಮಾನ್ಯರಿಗೂ ಉಪಯುಕ್ತವಾಗಿದೆ. ಇಂತಹ ಸುಮಾರು 70 ತಕ್ಕು ಹೆಚ್ಚಿನ ಪ್ರಕಾಶನಗಳನ್ನು ಮಂದಿರವು ಹೊರತಂದಿದೆ. ಈ ಪ್ರಕಟಣೆಗಳ ಪಟ್ಟಿಯನ್ನು ಶ್ರೀಮಂದಿರದ ವೆಬ್ ಸೈಟಿನಲ್ಲಿ(www.ayvm.in) ಕಾಣಬಹುದು. ಇವೆಲ್ಲವೂ ಅಯೋವಿಮಂದ ಹೃದಯ ಸ್ಥಾನದಲ್ಲಿರುವ ಭಾರತೀಯ ಸಂಸ್ಕೃತಿಯ ಆಳ ಅಗಲಗಳ ಪರಿಚಯವನ್ನು ಕೊಡುತ್ತವೆ. 'ಆರ್ಯಸಂಸ್ಕೃತಿ' ಎಂಬ ಮಂದಿರದ ಮಾಸಪತ್ರಿಕೆಯೂ ಸಹ ಸುಮಾರು 40 ವರ್ಷಗಳಿಂದ ಮಹಾಗುರುವಿನ ವಿಚಾರಗಳನ್ನು ಜನರ ಮುಂದಿಡುವ ಕಾರ್ಯವನ್ನು ನಡೆಸುತ್ತಿದೆ.

2. ಉಪನ್ಯಾಸಗಳು, ಕಾರ್ಯಾಗಾರಗಳು

ಶ್ರೀಮಂದಿರದ ಆವರಣದಲ್ಲಿ ವೇದಾಂತಶಾಸ್ತ್ರ, ಧರ್ಮಶಾಸ್ತ್ರ, ಆಯುರ್ವೇದ, ಯೋಗ, ರಾಮಾಯಣ-ಮಹಾಭಾರತ-ಭಾಗವತ, ಆಚಾರ-ವಿಚಾರ, ಕಲೆಗಳು ಮುಂತಾದ ವಿಚಾರಗಳನ್ನು ಕುರಿತ ಸಾವಿರಾರು ಉಪನ್ಯಾಸಗಳು ಮಂದಿರದ ಎಲ್ಲ ಶಾಖೆಗಳಲ್ಲೂ ಸಂಪನ್ನವಾಗುತ್ತಿವೆ. ಭಾರತೀಯ ಸಂಸ್ಕೃತಿಯ ಆಳ-ಅಗಲಗಳನ್ನೂ, ಔನ್ನತ್ಯವನ್ನೂ, ಸೊಬಗನ್ನೂ ಸಾರುವ ವೇದ, ವೇದಾಂಗ, ಪುರಾಣ, ಇತಿಹಾಸ ಮುಂತಾದವುಗಳನ್ನು ತಿಳಿಯಪಡಿಸುವ ಕಾರ್ಯಾಗಾರಗಳು ತಿಂಗಳಿಗೊಮ್ಮೆ ನಡೆಯುತ್ತಲಿವೆ. ಹಾಗೆಯೇ ಸಂಸ್ಕೃತಿಯ ವಿವಿಧ ವಿಷಯಗಳನ್ನು ಅಧಿಕರಿಸಿ ಅನ್ಯಾನ್ಯ ವೇಧಿಕೆಗಳಲ್ಲಿ ಉಪನ್ಯಾಸಗಳನ್ನು ನಡೆಸುವುದು ಹಾಗೂ ಬಿಡಿ ಲೇಖನಗಳನ್ನು ಪ್ರಕಟಿಸುವುದು ಇತ್ಯಾದಿ ಕಾರ್ಯಕ್ರಮಗಳನ್ನು ಕಾಲ ದೇಶ ಔಚಿತ್ಯಗಳನ್ನನುಸರಿಸಿ ಸಂಸ್ಥೆಯು ಹಮ್ಮಿಕೊಂಡಿದೆ.

3. ಸಂಶೋಧನೆಗಳು

ಮಂದಿರವು ಭಾರತೀಯ ಸಂಸ್ಕೃತಿ-ನಾಗರಿಕತೆಗಳ ಬಗ್ಗೆ ಮೌಲಿಕವಾದ ಸಂಶೋಧನೆಯನ್ನು ನಡೆಸುತ್ತಿದ್ದು ಆಧುನಿಕ ಉಪಕರಣಗಳನ್ನೊಳಗೊಂಡ ಸಂಶೋಧನೆಯ ಫಲಗಳನ್ನು ಉಚಿತವಾದ ಕಾಲದೇಶಗಳಲ್ಲಿ ಲೋಕದ ಮುಂದಿಡುತ್ತಿದೆ.

ಸಹಸ್ರಾರು ಮಂದಿಯು ಏಕನಿಷ್ಠೆಯಿಂದ ಮಹಾಗುರುದಂಪತಿಗಳ ಆಶಯದಂತೆ, ಅವರ ಅನುಗ್ರಹವನ್ನು ಅವಲಂಬಿಸಿ ಸಂಸ್ಥೆಯ ಆಶ್ರಯದಲ್ಲಿ ನಿಶ್ಯಬ್ಧವಾಗಿ ಬೆಳೆಯುತ್ತಿದ್ದಾರೆ ಹಾಗೂ ಸನಾತನಾರ್ಯಭಾರತ ಸಂಸ್ಕೃತಿಯ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಈ ಎಲ್ಲ ಕೆಲಸ ಕಾರ್ಯಗಳಿಗೂ ಆವಶ್ಯಕವಾದ ವಿಚಾರಗಳನ್ನೂ, ಸ್ಫೂರ್ತಿಯನ್ನೂ, ಉತ್ತೇಜನವನ್ನೂ ನೀಡುತ್ತಿರುವುದು ಶ್ರೀಮಂದಿರದ ಅಧ್ಯಕ್ಷರಾದ ಶ್ರೀ ಶ್ರೀರಂಗಮಹಾಗುರುಗಳು ಎಂಬುದನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸುತ್ತೇವೆ.

ಶ್ರೀರಂಗಮಹಾಗುರುಗಳು ಧ್ಯಾನಸಮಾಧಿಯ ಉತ್ತುಂಗಶಿಖರವನ್ನೇರಿ ಅಲ್ಲಿರಾರಾಜಿಸುತ್ತಿರುವ ಜ್ಯೋತಿಯದರ್ಶನವನ್ನು ಮಾಡಿದವರಾಗಿದ್ದರು. ಹೊರಗೆ ಸಾಮಾನ್ಯ ಮನುಷ್ಯನಂತೆ ಸರಳ ಜೀವನವನ್ನು ನಡೆಸುತ್ತಿದ್ದರೂ ಕ್ಷಣಮಾತ್ರದಲ್ಲಿ ಒಳಪ್ರಪಂಚವನ್ನು ಪ್ರವೇಶಿಸಿ ಸಮಾಧಿಸ್ಥಿತಿಯನ್ನು ತಲುಪಬಲ್ಲವರಾಗಿದ್ದರು. ಅಲ್ಲಿ ಬೆಳಗುತ್ತಿರುವ ಜ್ಯೋತಿಯಿಂದಲೇ ಸಕಲ ವಿದ್ಯೆಗಳೂ ಹೊರಹೊಮ್ಮಿ ಬರುತ್ತಿರುವುದನ್ನು ತಮ್ಮ ಅನುಭವದ ಬೆಳಕಿನಲ್ಲಿ ಸಾರಿದರು. ಅವರು ಸಾವಿರಾರುಮಂದಿ ಶಿಷ್ಯರಿಗೆ ಜ್ಞಾನದೀಕ್ಷೆಯನ್ನುಕೊಟ್ಟು ಆ ವಿದ್ಯಾಮೂಲ ಜ್ಯೋತಿಯ ಕಡೆಗೆ ಅವರನ್ನು ಕರೆದೊಯ್ಯುವ ಮಹತ್ಕಾರ್ಯವನ್ನು ಕೈಗೊಂಡಿರುವ ಧೀರ ಪುರುಷರು.